60 ವಸಂತ ಪೂರೈಸಿದ ಗೋವಾದ ಕನ್ನಡ ಸಂಘ ಮಡಗಾಂವದ ವೀರಶೈವ ಲಿಂಗಾಯತ ಮಠ ಸಭಾಂಗಣದಲ್ಲಿ ಅದ್ಧುರಿ ಕಾರ್ಯಕ್ರಮ ಆಯೋಜಿಸಿದ್ದು, ಕಾರವಾರದ ಪ್ರತಿಭೆ ಅರುಣಾ ಬಿಷ್ಟಣ್ಣನವರ ಪ್ರದರ್ಶಿಸಿದ ಭರತನಾಟ್ಯಕ್ಕೆ ಪ್ರೇಕ್ಷಕರು ತಲೆತೂಗಿದರು.
ಮಕ್ಕಳಿಗಾಗಿ ನಡೆದ ರಸಪ್ರಶ್ನೆ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದವು. ಕಾರವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಗಣೇಶ ಬಿಷ್ಟಣ್ಣನವರ ಈ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು `ನಾವೆಲ್ಲರೂ ಎಲ್ಲಿಯೋ ಹುಟ್ಟಿ ಇನ್ನೆಲ್ಲಿಯೋ ಬೆಳೆಯುತ್ತೇವೆ. ಬದುಕು ಅಷ್ಟೊಂದು ಔಚಿತ್ಯಪೂರ್ಣ. ಜಾತಿ- ಧರ್ಮ ಏಕ ಸಂಸ್ಕೃತಿಯನ್ನು ಬಿಂಬಿಸಿದರೆ ಭಾಷೆ ಬಹುಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ. ಭಾಷೆಯಿಂದ ಬಾಂಧವ್ಯ ವೃದ್ಧಿಯಾಗಿ ಬದುಕುಗಟ್ಟಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಬಾಲವಿಕಾಸ ಅಕಾಡೆಮಿ ಸಂಸ್ಥಾಪಕ ಸದಸ್ಯೆ ಲೀಲಾವತಿ ಕುಲಕರ್ಣಿ ಅವರು ಮಾತನಾಡಿ `ಜೀವನದಲ್ಲಿ ಸಾಮಾಜಿಕ ಶಿಸ್ತು ಅತ್ಯಗತ್ಯ. ಬದುಕಿನಲ್ಲಿ ಸಂಸ್ಕಾರ ಬೆಳೆಸಿಕೊಳ್ಳಬೇಕು’ ಎಂದು ಕರೆ ನೀಡಿದರು. ಗೋವಾ ಕನ್ನಡ ಸಂಘದ ಅಧ್ಯಕ್ಷ ಮೋಹನ್ ಕಾಂಬಳೆ ಅಧ್ಯಕ್ಷೀಯ ಮಾತನಾಡಿದರು. ಎಸ್ ಎಸ್ ಸಿ ಸಾಧಕ ವಿದ್ಯಾರ್ಥಿಗಳಾದ ಅಚ್ಯುತ ದೇಶಪಾಂಡೆ, ಸಾನ್ವಿ ಹಿರೇಮಠ, ಪ್ರತೊಕ್ಷಾ ಈಟಿ, ಪ್ರಾಚಿ ಮಾಸ್ತಿಹೊಳಿಮಠ, ಅಧಿತಿ ರಾವ್, ದೀಪಾ ಗಣೇಶ ಭಟ್, ಬೇಬಿ ದೇವಗಿರಿ, ಫಾಲಕ್ನಾಜ್ ಸೌದಾಗರ, ನೂರಾನಿ ಬಂಕಾಪುರ ಅವರನ್ನು ಈ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕನ್ನಡ ರಸಪ್ರಶ್ನೆ ಕಾರ್ಯಕ್ರಮವನ್ನು ಕಿರಣ ಕಮ್ಮಾರ ನಡೆಸಿಕೊಟ್ಟರು.
ಪ್ರಮುಖರಾದ ಮಲ್ಲಿಕಾರ್ಜುನಪ್ಪ, ಮೋಹನ್ ಪ್ಯಾಟಿ, ಶ್ವೇತಾ ಚಂದ್ರಕಾoತ ಹಿರೇಮಠ, ದಿಗಂಬರ ಕುಲಕರ್ಣಿ, ಕೃಷ್ಣಾಜೀ ಬಗಲಿ, ಭಾರತಿ ಮೋಹನ ಕಾಂಬಳೆ ಮತ್ತು ಸ್ಮೀತಾ ಕೃಷ್ಣಾಜೀ ಬಗಲಿ ತಮ್ಮ ಜವಾಬ್ದಾರಿ ನಿಭಾಯಿಸಿದರು.