`ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯ ಹಾಗೂ ಸಿಬ್ಬಂದಿ ಹುದ್ದೆ ಖಾಲಿಯಿದ್ದು, ಅವುಗಳ ನೇಮಕಾತಿ ನಡೆಯಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಆರೋಗ್ಯ ಸಚಿವರಿಗೆ ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೆಲ್ ರೋಡ್ರಿಗಸ್ ಪತ್ರ ರವಾನಿಸಿದ್ದಾರೆ.
`ಕುಮಟಾ ಗೋಕರ್ಣ, ಹೊನ್ನಾವರ ಸೇರಿ ಅನೇಕ ಆಸ್ಪತ್ರೆಗಳಲ್ಲಿ ನುರಿತ ವೈದ್ಯರ ಕೊರತೆಯಿದೆ. ಹೀಗಾಗಿ ಬಡವರು ಖಾಸಗಿ ಆಸ್ಪತ್ರೆ ಅವಲಂಬಿಸುವುದು ಅನಿವಾರ್ಯವಾಗಿದ್ದು, ಸಣ್ಣ ಸಣ್ಣ ಚಿಕಿತ್ಸೆಗಳಿಗೂ 20-30 ಸಾವಿರ ರೂ ವೆಚ್ಚವಾಗುತ್ತಿದೆ. ಇದರಿಂದ ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ’ ಎಂದು ಅವರು ಸರ್ಕಾರದ ಗಮನಕ್ಕೆ ತಂದರು. `ಮಾರ್ಚ ಅಂತ್ಯದಲ್ಲಿ ಕುಮಟಾದ ವೈದ್ಯ ಕೃಷ್ಣಾನಂದ ಅವರು ನಿವೃತ್ತರಾಗಿದ್ದಾರೆ. ಅವರ ಸ್ಥಳಕ್ಕೆ ಬೇರೆ ವೈದ್ಯರ ನೇಮಕ ಆಗಬೇಕು. ಇದರೊಂದಿಗೆ ಜಿಲ್ಲೆಯ ಎಲ್ಲಾ ಆಸ್ಪತ್ರೆಯಲ್ಲಿಯೂ ಅಗತ್ಯ ವೈದ್ಯಕೀಯ ಸಿಬ್ಬಂದಿ ನೇಮಿಸಬೇಕು’ ಎಂದು ಒತ್ತಾಯಿಸಿದರು.
ಉತ್ತರ ಕನ್ನಡ ಜಿಲ್ಲಾಡಳಿತದ ಮೂಲಕ ಈ ಪತ್ರವನ್ನು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡುರಾವ್ ಅವರಿಗೆ ರವಾನಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ನನ್ನೀ ಸಾಬ್, ಅಹ್ಮದ್ ವಲ್ಲಿ, ಗಣಪತಿ ಮುಕ್ರಿ ಹಾಜರಿದ್ದು, ವೈದ್ಯರಿಲ್ಲದ ಕಾರಣ ಆಗುವ ಸಮಸ್ಯೆಗಳ ಬಗ್ಗೆ ವಿವರಿಸಿದರು.