ದಾಂಡೇಲಿಯ ಕುಳಗಿ ಅಂಬಿಕಾನಗರ ರಸ್ತೆ ಅಂಚಿನಲ್ಲಿ ಆನೆಯೊಂದು ಸಾವನಪ್ಪಿದೆ. ಈ ವಿಷಯ ಅರಿತ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವನ್ಯಜೀವಿ ಪ್ರದೇಶ ವ್ಯಾಪ್ತಿಯಲ್ಲಿ ಈ ಆನೆ ಸಾವನಪ್ಪಿದೆ. ಮಂಗಳವಾರ ಸಂಜೆ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿಗೆ ಆನೆ ಮಲಗಿರುವಂತೆ ಭಾಸವಾಗಿದೆ. ಹತ್ತಿರ ಹೋಗಿ ನೋಡಿದಾಗ ಆನೆ ಸಾವನಪ್ಪಿರುವುದು ಗೊತ್ತಾಗಿದೆ. ಕೂಡಲೇ ಸಿಬ್ಬಂದಿ ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.
ಈ ಬಗ್ಗೆ ಬುಧವಾರ ಮಾಹಿತಿ ನೀಡಿದ ವನ್ಯಜೀವಿ ವಿಭಾಗದ ಸಿಬ್ಬಂದಿ `ಆನೆ ಸಾಗವಾನಿ ಮರಕ್ಕೆ ಮೈ ತಿಕ್ಕುವಾಗ ಮರ ಅಲುಗಾಡಿದೆ. ಮರದ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಮರದ ಕೊಂಬು ತಗುಲಿದ್ದು, ಆನೆ ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿದೆ’ ಎಂದು ಹೇಳಿದ್ದಾರೆ.
14 ವರ್ಷದ ಹೆಣ್ಣು ಆನೆ ಸಾವನಪ್ಪಿದ್ದು, ಹಿರಿಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ವನ್ಯ ಜೀವಿ ಇಲಾಖೆಯ ನಿರ್ದೇಶಕ ನಿಲೇಶ ಸಿಂದೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ ಎಸ್ ಕಳ್ಳಿಮಠ, ಕುಳಗಿ ವಲಯ ಅರಣ್ಯಾಧಿಕಾರಿ ಸಾಗರ ಇನ್ನಿತರರು ಅಲ್ಲಿಯೇ ಇದ್ದಾರೆ.