ಕಾರವಾರದಲ್ಲಿ ಮನೆ ಮನೆಗೆ ಕಸ ಸಂಗ್ರಹಿಸುವ ವಾಹನ ಪ್ಲಾಸ್ಟಿಕ್-ಕಬ್ಬಿಣವನ್ನು ಸಂಗ್ರಹಿಸಿ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಶಿರಸಿಯಲ್ಲಿ ಕುಡಿಯುವ ನೀರಿನ ಕಬ್ಬಿಣದ ಪೈಪ್ ಕಳ್ಳತನ ಬೆನ್ನಲ್ಲೆ ಕಾರವಾರದ ಗುಜುರಿ ಮಾಫಿಯಾವೂ ಮುನ್ನಲೆಗೆ ಬಂದಿದೆ.
ಈ ಹಿಂದೆ ನಗರಸಭೆ ಅಧೀನದಲ್ಲಿರುವ ಸ್ಮಶಾನದ ಗೇಟ್ ಕಳ್ಳತನವಾಗಿತ್ತು. ಮತ್ತೊಮ್ಮೆ ನಗರಸಭೆ ಆವಾರದಲ್ಲಿ ದಾಸ್ತಾನು ಮಾಡಿದ ಕಬ್ಬಿಣವೂ ಕಣ್ಮರೆಯಾಗಿತ್ತು. ಈ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿಯೂ ಚರ್ಚೆ ನಡೆದಿದ್ದು, ಅದಾದ ನಂತರ ಜನ ಆ ವಿಷಯ ಮರೆತಿದ್ದರು. ಇದೀಗ ಕಾರವಾರ ನಗರಸಭೆ ವಾಹನ ಶಿರವಾಡದ ಗುಜುರಿ ಅಂಗಡಿ ಮುಂದೆ ನಿಂತಿರುವ ವಿಡಿಯೋ ವೈರಲ್ ಆದ ಹಿನ್ನಲೆ ನಗರಸಭೆ ಸಿಬ್ಬಂದಿ ಗುಜುರಿ ವ್ಯಾಪಾರ ಶುರು ಮಾಡಿದ ಅನುಮಾನವ್ಯಕ್ತವಾಗಿದೆ.
ನಗರಸಭೆ ವಾಹನ ಹಸಿ ಕಸ ಹಾಗೂ ಒಣಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತದೆ. ಹಸಿ ಕಸವನ್ನು ಗೊಬ್ಬರವನ್ನಾಗಿಸುವುದರ ಜೊತೆ ಒಣಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂಬುದು ಸರ್ಕಾರದ ನಿಯಮ. ಆದರೆ, ನಗರಸಭೆ ವಾಹನದ ಮೂಲಕ ಸಂಗ್ರಹಿಸಲಾದ ಒಣ ಕಸ ಶಿರವಾಡದ ಗುಜರಿ ಅಂಗಡಿಗೆ ತಲುಪುವುದರಿಂದ ನಗರಸಭೆ ಆದಾಯಕ್ಕೆ ಹೊಡೆತ ಬೀಳುತ್ತದೆ. ಕಳ್ಳತನ ನಡೆಸುವವರಿಗೂ ಸರ್ಕಾರವೇ ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬುದು ಎನ್ ದತ್ತಾ ಅವರ ಆರೋಪ.
`ಕಬ್ಬಿಣ್ಣ ಕಾಳಸಂತೆ ವ್ಯಾಪಾರ ನಡೆದಿಲ್ಲ ಎನ್ನುವುದಾದರೆ, ಕಾರವಾರ ನಗರಸಭೆ ವ್ಯಾಪ್ತಿಗೆ ಒಳಪಡದ ಶಿರವಾಡದ ಗುಜುರಿ ಅಂಗಡಿ ಬಳಿ ನಗರಸಭೆ ಕಸದ ವಾಹನ ಹೋಗಿದ್ದು ಏತಕೆ?’ ಎಂಬುದು ಅವರ ಪ್ರಶ್ನೆ. ಮನೆ ಮನೆಯಲ್ಲಿಯೂ ನೀಡುವ ಪ್ಲಾಸ್ಟಿಕ್, ಕಬ್ಬಿಣವನ್ನು ಸಮರ್ಪಕ ರೀತಿಯಲ್ಲಿ ಬಳಸಬೇಕು. ಅದನ್ನು ಸಿಬ್ಬಂದಿ ಕಾಳಸಂತೆಯಲ್ಲಿ ಮಾರುವ ಬದಲು ವೈಜ್ಞಾನಿಕ ವಿಲೇವಾರಿ ನಡೆಸಬೇಕು’ ಎಂಬುದು ಎನ್ ದತ್ತಾ ಅವರ ಒತ್ತಾಯ. `ಗುಜರಿ ಸಾಮಗ್ರಿಗಳನ್ನು ಹರಾಜು ಹಾಕಿ ವಿಲೇವಾರಿ ಮಾಡಿದರೂ ನಗರಸಭೆಗೆ ಆದಾಯ ಬರುತ್ತದೆ. ಗುಜುರಿ ಅಂಗಡಿಗೆ ಕೊಡುವ ಬದಲು ಹರಾಜು ಹಾಕಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು’ ಎಂದವರು ಆಗ್ರಹಿಸಿದರು.