ಕಾರವಾರದ ಮಾಜಾಳಿಯಿಂದ ಭಟ್ಕಳದವರೆಗಿನ ಅರಬ್ಬಿ ಸಮುದ್ರದಲ್ಲಿ ಜೂನ್ 19ರ ಬೆಳಗ್ಗೆ 8.30ರವರೆಗೆ ಭಾರೀ ಪ್ರಮಾಣದ ಅಲೆಗಳು ಏಳುವ ಸಾಧ್ಯತೆಯಿದೆ. ಹೀಗಾಗಿ ಆ ಭಾಗದ ಜನ ಹಾಗೂ ಮೀನುಗಾರರು ಮುನ್ನಚ್ಚರಿಕೆವಹಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.
ಹವಾಮಾನ ಇಲಾಖೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಈ ಬಗ್ಗೆ ಎಚ್ಚರಿಕೆ ನೀಡಿದೆ. ಸಮುದ್ರದಲ್ಲಿ 3.7ರಿಂದ 4.2 ಮೀಟರ್ ಎತ್ತರದ ಅಲೆಗಳು ಬರುವ ಸಾಧ್ಯತೆಯಿದೆ. ಹೀಗಾಗಿ ಸಣ್ಣ ಹಾಗೂ ಮಧ್ಯಮ ದೋಣಿಗಳಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳುವುದು ಅಪಾಯಕಾರಿ.
ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ, ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವಂತೆ ಮತ್ತು ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆವಹಿಸಬೇಕು. ಸಮುದ್ರ ತೀರದಲ್ಲಿ ಯಾವುದೇ ಮನರಂಜನಾ ಚಟುವಟಿಕೆ ನಡೆಸಬಾರದು’ ಎಂದು ಸೂಚಿಸಲಾಗಿದೆ. ಜಿಲ್ಲಾಡಳಿತದ ತುರ್ತು ಸೇವೆ: 08382-229857, ಹಾಗೂ ಮೋ 9483511015 ಸಹಾಯಕ್ಕೆ ಸಿದ್ಧವಿದೆ.
ಮಳೆ ವರದಿ
ಇನ್ನೂ ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ 44.3 ಮಿಮೀ,ಭಟ್ಕಳದಲ್ಲಿ 17.4, ಹಳಿಯಾಳ 4.2, ಹೊನ್ನಾವರ 26.8, ಕಾರವಾರ 29.7, ಕುಮಟಾ 23 ಮುಂಡಗೋಡ 5.5, ಸಿದ್ದಾಪುರ 58.3, ಶಿರಸಿ 43.8, ಸೂಪಾ 23, ಯಲ್ಲಾಪುರ 19.7 ದಾಂಡೇಲಿಯಲ್ಲಿ 4.5 ಮಿಲಿ ಮೀಟರ್ ಮಳೆಯಾಗಿದೆ. ಒಂದೇ ದಿನದ ಈ ಅವಧಿಯಲ್ಲಿ 11 ಮನೆಗಳಿಗೆ ಹಾನಿಯಾಗಿದೆ.
ಜೂನ್ 1ರಿಂದ ಇದುವರೆಗೆ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ 28 ಕಿಮೀ ರಾಜ್ಯ ಹೆದ್ದಾರಿ, 59 ಕಿ.ಮೀ ಜಿಲ್ಲಾ ಮುಖ್ಯ ರಸ್ತೆ, 135.3 ಕಿಮೀ ಗ್ರಾಮೀಣ ರಸ್ತೆ, 44 ಸೇತುವೆ, 2 ಶಾಲಾ ಕಟ್ಟಡ, 14 ಅಂಗನವಾಡಿ ಕಟ್ಟಡ, 1371 ವಿದ್ಯುತ್ ಕಂಬ, 57 ಟ್ರಾನ್ಸ್ ಫಾರ್ಮರ್‌ಗಳು, 3.392 ಕಿಮೀ ಉದ್ದದ ವಿದ್ಯುತ್ ತಂತಿಗಳಿಗೆ ಹಾನಿ ಸಂಭವಿಸಿದೆ.