ಯಲ್ಲಾಪುರದ ಗೋಪಾಲಕೃಷ್ಣ ಹೆಬ್ಬಾರ್ ಅವರ ಮನೆ ಹಿಂದಿನ ಶೆಡ್’ಗೆ ನುಗ್ಗಿ ಅಲ್ಲಿದ್ದ ಅಡಿಕೆ ಅಪಹರಿಸಿದ್ದ ಕಳ್ಳನನ್ನು ಸಿಪಿಐ ರಮೇಶ ಹಾನಾಪುರ ಪತ್ತೆ ಹಚ್ಚಿದ್ದಾರೆ.
ಮಾರ್ಚ 4ರಂದು ಯಲ್ಲಾಪುರದ ಇಡಗುಂದಿಯ ಜೋಗದಮನೆಯಲ್ಲಿ ಗೋಪಾಲಕೃಷ್ಣ ಹೆಬ್ಬಾರ್ ಅವರ ಗೋದಾಮಿನಲ್ಲಿದ್ದ ಅಡಿಕೆ ಕಳ್ಳತನ ನಡೆದಿತ್ತು. 1.40 ಲಕ್ಷ ರೂ ಮೌಲ್ಯದ 7 ಅಡಿಕೆ ಮೂಟೆಗಳು ಕಾಣೆಯಾಗಿದ್ದವು. ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಯಲ್ಲಾಲಿಂಗ ಕನ್ನೂರು, ಸಿದ್ದಪ್ಪ ಗುಡಿ, ಮಹಾವೀರ ಕಾಂಬ್ಳೆ, ಶೆಡಜಿ ಚೌಹಾಣ್ ಮೊದಲಾದವರು ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು.
ಪೊಲೀಸ್ ಸಿಬ್ಬಂದಿ ಬಸವರಾಜ ಹಗರಿ, ಉಮೇಶ ತುಂಬರಗಿ ಕಳ್ಳರ ಹುಡುಕಾಟ ನಡೆಸಿದರು. ಬುಧವಾರ ತಾವರೆಕಟ್ಟಾದ ಮಂಜುನಾಥ @ ಪುಟ್ಟು ಲುಯಿಸ್ ಸಿದ್ದಿ ಎಂಬಾತ ಸಿಕ್ಕಿಬಿದ್ದಿದ್ದು, ಆತನ ವಿಚಾರಣೆ ನಡೆಸಿದರು. ಆತ ತನ್ನ ಸಹಚರನ ಜೊತೆ ಸೇರಿ ಅಡಿಕೆ ಅಪಹರಿಸಿರುವುದು ತನಿಖೆಯಿಂದ ಗೊತ್ತಾಯಿತು. 1.20 ಕ್ವಿಂಟಾಲ್ ಅಡಿಕೆಯನ್ನು ಪೊಲೀಸರು ವಶಕ್ಕೆಪಡೆದಿದ್ದು, ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ.