ನೆರೆ ಪ್ರವಾಹ, ಗುಡ್ಡ ಕುಸಿತ ಸೇರಿ ಪ್ರಕೃತಿ ವಿಕೋಪ ನಡೆದಾಗ ಸರ್ಕಾರಿ ಶಾಲೆಯನ್ನು ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತದೆ. ಆದರೆ, ಕುಮಟಾದ ಮೂಡಂಗಿಯಲ್ಲಿ ಸರ್ಕಾರಿ ಶಾಲೆಯೇ ಶಿಥಿಲಾವ್ಯವಸ್ಥೆಯಲ್ಲಿದೆ. ಜೀವಭಯದಿಂದ ನಲುಗಿದ ಶಿಕ್ಷಕರು ಮಕ್ಕಳನ್ನು ಬೇರೆಯವರ ಮನೆಗೆ ಕರೆದೊಯ್ದು ಪಾಠ ಮಾಡುತ್ತಿದ್ದಾರೆ.
ಮೂಡಂಗಿಯ ಸರ್ಕಾರಿ ಶಾಲೆಗೆ ಶತಮಾನ ತುಂಬಿದೆ. ಆದರೂ, ಅಲ್ಲಿ ಹೊಸ ಕಟ್ಟಡ ನಿರ್ಮಾಣದ ಕೆಲಸ ನಡೆದಿಲ್ಲ. ಕಳೆದ ವರ್ಷ ಗುಡ್ಡ ಕುಸಿತವಾಗಿದ್ದರಿಂದ ಶಾಲಾ ಕಟ್ಟಡವೂ ನಲುಗಿದೆ. ಕಳೆದ ವರ್ಷದ ಗುಡ್ಡ ಕುಸಿತದ ಮಣ್ಣನ್ನು ಈವರೆಗೂ ತೆರವು ಮಾಡಿಲ್ಲ. ಮತ್ತೆ ಗುಡ್ಡ ಕುಸಿಯುವ ಆತಂಕವೂ ದೂರವಾಗಿಲ್ಲ.
ಕಳೆದ ಮಳೆಗಾಲದಲ್ಲಿ ಶಾಲಾ ಆವರಣಕ್ಕೆ ಗುಡ್ಡ ಕುಸಿತದ ಮಣ್ಣು ಬಂದಿದ್ದು, ಆ ವೇಳೆ ಶಾಲೆಗೆ ರಜೆ ನೀಡಿದ್ದ ಕಾರಣ ಮಕ್ಕಳು ಬಚಾವಾಗಿದ್ದರು. ಅದಾದ ನಂತರ ಅನಿವಾರ್ಯವಾಗಿ ಅದೇ ಶಾಲೆಯಲ್ಲಿ ಶಿಕ್ಷಣ ಮುಂದುವರೆದಿದ್ದು, ಇದೀಗ ಸಮೀಪದ ಮನೆಯೊಂದರಲ್ಲಿ ಮಕ್ಕಳಿಗೆ ಪಾಠ ನಡೆಯುತ್ತಿದೆ. ಶಾಲೆ ಅಂಗಳಕ್ಕೆ ಕಲ್ಬಂಡೆ ಬಂದು ಬಿದ್ದಿರುವುದನ್ನು ಗಣಿ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದರು. ಶಿಕ್ಷಣ ಇಲಾಖೆಯವರು ಆಗಮಿಸಿ ಅದನ್ನು ವೀಕ್ಷಿಸಿದ್ದರು. ಆದರೆ, ಅದರಿಂದ ಶಾಲೆಗೆ ಕಿಂಚಿತ್ತು ಪ್ರಯೋಜನ ಆಗಲಿಲ್ಲ. `ಅಂಗಳದಲ್ಲಿ ಬಿದ್ದ ಬಂಡೆ ತೆಗೆಯುತ್ತೇವೆ. ಮಣ್ಣನ್ನು ಬದಿಗೆ ಸರಿಸುತ್ತೇವೆ’ ಎಂದು ಅಧಿಕಾರಿಗಳು ನೀಡಿದ ಭರವಸೆಯೂ ಈಡೇರಿಲ್ಲ.
ಮೂಡಂಗಿ ಭಾಗದ ನದಿ ತೀರದ ಮನೆಗಳಿಗೆ ನೀರು ನುಗ್ಗಿದಾಗ ಈ ಶಾಲೆಗೆ ಅಲ್ಲಿನವರನ್ನು ಸ್ಥಳಾಂತರಿಸಲಾಗುತ್ತದೆ. ಆದರೆ, ಶಾಲೆಯ ಮೇಲೆ ಮಣ್ಣು ಬಿದ್ದರೆ ಎಲ್ಲಿ ಹೋಗುವುದು? ಎಂಬುದು ಇಲ್ಲಿನವರ ಪ್ರಶ್ನೆ. ಸದ್ಯ ಅದೇ ಆತಂಕದಲ್ಲಿ ಶಾಲಾ ಮಕ್ಕಳ ಸ್ಥಳಾಂತರ ನಡೆದಿದ್ದು, ಸುರಕ್ಷತೆ ಒದಗಿಸಿ ಎಂದು ಮನವಿ ಮಾಡಿದರೂ ಕೇಳುವವರಿಲ್ಲ ಎಂದು ಗ್ರಾ ಪಂ ಸದಸ್ಯ ಮೋಹನ ಮೂಡಂಗಿ ಅಸಮಧಾನವ್ಯಕ್ತಪಡಿಸಿದರು.