ಕೆಎಸ್‌ಆರ್‌ಟಿಸಿ ಡೀಸಿ ಪ್ರಿಯಾಂಗ ಎಂ ಗುರುವಾರ ಯಲ್ಲಾಪುರ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಸ್ ನಿಲ್ದಾಣ ಹಾಗೂ ಡಿಪೋದಲ್ಲಿ ಕಾಣಿಸಿದ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ಅವರು ಅಧೀನ ಅಧಿಕಾರಿ-ಸಿಬ್ಬಂದಿಗೆ ಸೂಚನೆ ನೀಡಿದರು.
`ಸರ್ಕಾರಿ ಬಸ್ಸುಗಳಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಬಸ್ ನಿಲ್ದಾಣದಲ್ಲಿಯೂ ಸ್ವಚ್ಚತೆ ಕಾಪಾಡಬೇಕು. ಅಂತರರಾಜ್ಯ ಮಾರ್ಗದ ಬಸ್ಸುಗಳು ಸಮಯಕ್ಕೆ ಸರಿಯಾಗಿ ಚಲಿಸಬೇಕು’ ಎಂದವರು ಸೂಚಿಸಿದರು. `ಅಗತ್ಯ ಸೇವೆ ಹಾಗೂ ತಾತ್ಕಾಲಿಕ ದುರಸ್ತಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಹೇಳಿದರು.
`ಬಸ್ಸುಗಳಲ್ಲಿ ರೂಫ್ ಲೀಕೆಜ್ ಇದ್ದರೆ ಅವುಗಳನ್ನು ಪರಿಶೀಲಿಸಬೇಕು. ಅಗತ್ಯ ದುರಸ್ತಿಗಳನ್ನು ಶೀಘ್ರವಾಗಿ ಕೈಗೊಳ್ಳಬೇಕು’ ಎಂದು ಅವರು ನಿರ್ದೇಶನ ನೀಡಿದರು. `ಸಣ್ಣಪುಟ್ಟ ದುರಸ್ತಿ ಹಾಗೂ ನಿರ್ವಹಣಾ ಸಮಸ್ಯೆಗಳನ್ನು ಕೂಡ ತಕ್ಷಣ ಸರಿಪಡಿಸಬೇಕು’ ಎಂದು ಆದೇಶಿಸಿದರು. ನಿಗಮ ವ್ಯವಸ್ಥಾಪಕರ ನಿರ್ದೇಶಕರವರ ವಿಶೇಷಾಧಿಕಾರಿ ರವಿ ಅಂಚಿಗಾವಿ ಜೊತೆಗಿದ್ದರು.