ಅಂಕೋಲಾದಲ್ಲಿ ಮಾನವನ ಮೇಲೆ ದಾಳಿ ನಡೆಸಿದ್ದ ಚಿರತೆ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದೆ. ಕುಂಬ್ರಿಗದ್ದೆ ಹಳ್ಳದಂಚಿನ ಪ್ರದೇಶದಲ್ಲಿ ಚಿರತೆ ಶವ ಸಿಕ್ಕಿದೆ.
ಅಂಕೋಲಾ ವಾಸರಕುದ್ರಗಿ ಗ್ರಾಪಂ ವ್ಯಾಪ್ತಿಯ ಉಳಗದ್ದೆ ಗ್ರಾಮದ ಜನವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ನಿರ್ಮಾಣ ಹಂತದ ಮನೆಯೊಳಗೆ ಅವಿತಿದ್ದ ಚಿರತೆ ಸಂತೋಷ ಗೌಡ ಎಂಬಾತರ ಮೇಲೆ ಆಕ್ರಮಣ ನಡೆಸಿತ್ತು. ಈ ಹಿಂದೆಯೂ ಅನೇಕ ಬಾರಿ ಕೋಳಿ-ನಾಯಿಗಳನ್ನು ಅಪಹರಿಸುತ್ತಿದ್ದ ಚಿರತೆ ಮಾನವನ ಮೇಲೆಯೂ ದಾಳಿ ಮಾಡಿದ್ದರಿಂದ ಜನ ಆತಂಕಗೊoಡಿದ್ದರು. ಹೀಗಾಗಿ ಚಿರತೆ ಸ್ಥಳಾಂತರಕ್ಕೆ ಒತ್ತಾಯಿಸಿದ್ದರು.
ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಬೋನು ಅಳವಡಿಸಿದ್ದರು. ಆದರೆ, ಚಿರತೆ ಆ ಬೋನಿನ ಬಳಿ ಸುಳಿದಿರಲಿಲ್ಲ. ಅದಾದ ನಂತರ ಊರಿನಲ್ಲಿ ಎಲ್ಲಿಯೂ ಚಿರತೆ ಕಾಣಿಸಿಕೊಂಡಿರಲಿಲ್ಲ. ಈ ನಡುವೆ ಕುಂಬ್ರಿಗದ್ದೆ ಹಳ್ಳದಂಚಿನಲ್ಲಿ ಚಿರತೆಯ ಶವ ಸಿಕ್ಕಿದೆ. ಅರಣ್ಯಾಧಿಕಾರಿಗಳು ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇನ್ನಿತರ ವನ್ಯಜೀವಿಯೊಡಗಿನ ಕಾದಾಟದಲ್ಲಿ ಚಿರತೆ ಸಾವನಪ್ಪಿದ ಅನುಮಾನಗಳಿವೆ.