ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೈಗಾ ಅಣು ವಿದ್ಯುತ್ ಘಟಕದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕಿಂಚಿತ್ತು ಕಿಮ್ಮತ್ತಿಲ್ಲ!
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಯಾರನ್ನು ಗಟ್ಟಿಯಾಗಿ ಪ್ರಶ್ನಿಸುವುದಿಲ್ಲ. ತಪ್ಪು ಮಾಡಿದವರನ್ನು ದೊಡ್ಡದಾಗಿ ದಂಡಿಸುವುದಿಲ್ಲ. ಜೋರಾಗಿ ಬೈದು ಬುದ್ದಿ ಹೇಳುವ ಸ್ವಭಾವವನ್ನು ಸಹ ಅವರು ರೂಢಿಸಿಕೊಂಡಿಲ್ಲ. ಸಂಸದರಾಗಿ ಅಧಿಕಾರದಲ್ಲಿದ್ದರೂ ತಮ್ಮ ಅಧಿಕಾರಿಗಳ ಮುಂದೆ ತಮ್ಮ ಅಧಿಕಾರ ಚಲಾಯಿಸುತ್ತಿಲ್ಲ. ಅವರಿವರಲ್ಲಿ ಮನವಿ ಮಾಡಿಯೇ ಕೆಲಸ ಮಾಡಿಸಿಕೊಳ್ಳುವ ವಿಶ್ವೇಶ್ವರ ಹೆಗಡೆ ಕಾಗೇರಿ ಎಂದಿಗೂ ಸಿಟ್ಟು-ಸಿಡುಕು ಮಾಡಿಕೊಂಡವರಲ್ಲ. ಹೀಗಾಗಿ ಬೇರೆ ಬೇರೆ ರಾಜಕಾರಣಿಗಳಿಗೆ ಕೊಡುವಂತೆ ಅಧಿಕಾರಿಗಳು ಸಂಸದ ಕಾಗೇರಿ ಅವರಿಗೆ ಬಹಿರಂಗವಾಗಿ ಗೌರವ ಕೊಡುತ್ತಿಲ್ಲ. ಸಂಸದರ ಅಧೀನದಲ್ಲಿ ಬರುವ ಅಧಿಕಾರಿಗಳು ಸಹ ಶಿಷ್ಟಾಚಾರ ಪಾಲನೆ ವಿಷಯದಲ್ಲಿಯೇ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಮರೆತಿದ್ದಾರೆ.
ಕಳೆದ ವಾರ ಯಲ್ಲಾಪುರದಲ್ಲಿ ಕೇಂದ್ರ ಸರ್ಕಾರದ ಜಲ ಜೀವನ್ ಮಿಶನ್ ಯೋಜನೆ ಅಡಿ ಮನೆ ಮನೆಗೂ ನೀರು ಒದಗಿಸುವ ಕಾರ್ಯಕ್ರಮದಲ್ಲಿಯೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅವಮಾನವಾಗಿತ್ತು. ಇದೀಗ ಕಾರವಾರದ ಕೈಗಾ ಅಣು ವಿದ್ಯುತ್ ಘಟಕವೂ ಯಲ್ಲಾಪುರದ ಮಾವಿನಮನೆ ಮಲವಳ್ಳಿ ಪಂಚಾಯತ ವ್ಯಾಪ್ತಿಯಲ್ಲಿ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿ ರಸ್ತೆ ನಿರ್ಮಿಸಿದ್ದು, ಅದರ ಉದ್ಘಾಟನಾ ಆಮಂತ್ರಣ ಪತ್ರಿಕೆಯಲ್ಲಿ ಸಂಸದರ ಹೆಸರು ಹಾಕಿದ್ದರೂ ಆಮಂತ್ರಣ ಪತ್ರಿಕೆಯನ್ನು ಸಂಸದರಿಗೆ ತಲುಪಿಸಿಲ್ಲ. ಕಾರ್ಯಕ್ರಮಕ್ಕೆ ಸಹ ಅವರನ್ನು ಆಮಂತ್ರಿಸಲಿಲ್ಲ. ಆಮಂತ್ರಣ ಪತ್ರಿಕೆಯಲ್ಲಿದ್ದ ಸಂಸದರ ಹೆಸರು ಕಲ್ಲಿನಿಂದ ಕೆತ್ತಿದ ಉದ್ಘಾಟನಾ ನಾಮಫಲಕದಲ್ಲಿ ಕಾಣುತ್ತಿಲ್ಲ!
ಮಾವಿನಮನೆ ಗ್ರಾಮ ಪಂಚಾಯತದ ಗೇರಾಳ-ಹೆಗ್ಗಾರ್ ಭಾಗದಲ್ಲಿ ಕೈಗಾ ಅಣು ವಿದ್ಯುತ್ ಘಟಕವೂ 3ಕಿಮೀ ರಸ್ತೆ ನಿರ್ಮಿಸಿದೆ. ಜೂನ್ 16ರಂದು ಈ ರಸ್ತೆಯ ಉದ್ಘಾಟನೆಯೂ ನಡೆದಿದೆ. ಮಾವಿನಮನೆ ಗ್ರಾಮ ಪಂಚಾಯತ ಅಧ್ಯಕ್ಷ-ಸದಸ್ಯರ ಜೊತೆ ಗುತ್ತಿಗೆದಾರರಾದ ರಾಮಶ್ರೀ ಗ್ಲೋಬಲ್ ಕನ್ಸಕ್ಷನ್ ಪ್ರೆö ಲಿ ಕಂಪನಿ ಹೆಸರನ್ನು ಕಲ್ಲಿನ ಕೆತ್ತಿಗೆಯಲ್ಲಿ ಬರೆಯಲಾಗಿದೆ. ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರ ಜೊತೆ ಕೈಗಾದ ಐದು ಅಧಿಕಾರಿಗಳ ಹೆಸರು ಕಲ್ಲಿನ ಕೆತ್ತನೆಯಲ್ಲಿ ಹೊಳೆಯುತ್ತಿದೆ. ಆದರೆ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರು ಬರೆಯಲು ಜಾಗ ಇರಿಸಿಲ್ಲ. ಅವರ ಹೆಸರನ್ನು ಬರೆಯಲು ಇಲ್ಲ.

ಆಮಂತ್ರಣ ಪತ್ರಿಕೆಯಲ್ಲಿ ಹೆಸರು ನಮೂದಿಸಿ, ಶಿಲಾನ್ಯಾಸ ಫಲಕದಲ್ಲಿ ಸಂಸದರ ಹೆಸರು ನಾಪತ್ತೆ ಆಗಿರುವ ಚಿತ್ರ
ಈ ಬಗ್ಗೆ ಬಿಜೆಪಿ ಆಕ್ಷೇಪವ್ಯಕ್ತಪಡಿಸಿದ್ದು, ಕೈಗಾ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಹೇಳಿದೆ. `ನಾವೇನು ತಪ್ಪು ಮಾಡಿಲ್ಲ. ರಾಜಕೀಯ ಆಟಗಳಿಗೂ ನಾವಿಲ್ಲ. ಈ ಪರಿಸ್ಥಿತಿಯಲ್ಲಿ ಅಧಿಕೃತವಾಗಿ ನಾವು ಏನನ್ನು ಹೇಳಲು ಸಾಧ್ಯವಿಲ್ಲ’ ಎಂದು mobiletime.in’ಗೆ ಕೈಗಾದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ!
ಬಿಜೆಪಿ ಪ್ರಶ್ನೆ:
`ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದು ಶಾಸಕ ಶಿವರಾಮ ಹೆಬ್ಬಾರ್ ಇದೇ ಸಭೆಯಲ್ಲಿ ಭಾಷಣ ಮಾಡಿದ್ದಾರೆ. ಆದರೆ, ನಾಮಫಲಕದಲ್ಲಿ ಸಂಸದರ ಹೆಸರು ಹಾಕದೇ ರಾಜಕಾರಣ ಮಾಡಲಾಗಿದೆ. ಸ್ಥಳೀಯ ಮುಖಂಡರ ಪ್ರಭಾವದಿಂದ ಹೀಗಾಗಿದೆಯಾ?’ ಎಂದು ಬಿಜೆಪಿ ಪ್ರಶ್ನಿಸಿದೆ. ಈ ಬಗ್ಗೆ ಸ್ಪಷ್ಠೀಕರಣ ಕೊಡಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ದಿಶಾ ಕಮೀಟಿ ಸದಸ್ಯರಾದ ಉಮೇಶ ಭಾಗ್ವತ ಮತ್ತು ಸುನಂದಾ ಮರಾಠಿ ಒತ್ತಾಯಿಸಿದ್ದಾರೆ. `ಸ್ಥಳೀಯ ಕೆಲ ಗ್ರಾ ಪಂ ಪ್ರತಿನಿಧಿಗಳು ಕ್ಷುಲ್ಲಕ ರಾಜಕಾರಣ ಮಾಡುತ್ತಿರುವ ಅನುಮಾನವಿದೆ’ ಎಂದು ಬಿಜೆಪಿಗರು ಹೇಳಿದ್ದಾರೆ.