ಅಂಕೋಲಾದ ಹೊಸಗದ್ದೆಯ KSRTC ನೌಕರ ರಾಜೇಶ ಗೌಡ ಜೂಜಾಟದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಹೀಗಾಗಿ ಪೊಲೀಸರು ರಾಜೇಶ ಗೌಡ ಜೊತೆ ಇನ್ನೂ ನಾಲ್ವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಜೂನ್ 7ರಂದು ರಾಜೇಶ ಗೌಡ ಅವರು ಹುಲಿದೇವರವಾಡದ ಬೆಳೆಸೆ ಗ್ರಾಮದ ಹಳ್ಳದ ಹತ್ತಿರ ಹಣ ಹೂಡಿಕೆಗೆ ಹೋಗಿದ್ದರು. ಕೂಲಿ ಕಾರ್ಮಿಕ ಗುರು ಗೌಡ, ಮಾದನಗೇರಿಯ ಮೀನುಗಾರ ವಿನಾಯಕ ಹರಿಕಂತ್ರ, ಬಬ್ರುವಾಡದ ಕೂಲಿ ಕಾರ್ಮಿಕ ನಾಗರಾಜ ನಾಯ್ಕ ಹಾಗೂ ಬೆಳಂಬಾರದ ಮುದ್ರಾಣಿ ಬಳಿಯ ಹರೀಶ ಗೌಡ ಜೊತೆ ಸೇರಿ ಇಸ್ಪೀಟ್ ಆಡುತ್ತಿದ್ದರು. `ಹೊರಗೆ 500ರೂಪಾಯಿ.. ಒಳಗೆ 500ರೂಪಾಯಿ’ ಎಂದು ದೊಡ್ಡದಾಗಿ ಕೂಗುತ್ತ ಇಸ್ಪಿಟ್ ಎಲೆಗಳ ಮೇಲೆ ಅವರೆಲ್ಲರೂ ಹಣ ಕಟ್ಟಿದ್ದರು.
ಕಾಡಿನ ಕಡೆಯಿಂದ ಬಂದ ಕೂಗಾಟದ ಸದ್ದು ಕೇಳಿದ ಅಂಕೋಲಾ ಪಿಎಸ್‌ಐ ಉದ್ದಪ್ಪ ಧರೇಪ್ಪನವರ್ ಅಲ್ಲಿಗೆ ತೆರಳಿ ದಾಳಿ ಮಾಡಿದರು. ಆಗ, ಹರೀಶ ಗೌಡ ಅಲ್ಲಿಂದ ಓಡಿ ಪರಾರಿಯಾದರು. ಅಲ್ಲಿದ್ದ 5400ರೂ ಹಣ ಹಾಗೂ ಉಳಿದವರನ್ನು ವಶಕ್ಕೆಪಡೆದ ಪೊಲೀಸರು ಕಾನೂನುಬಾಹಿರ ಆಟವಾಡುತ್ತಿದ್ದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ನ್ಯಾಯಾಲಯದ ಸೂಚನೆ ಮೇರೆ ಆ ಎಲ್ಲರ ಮೇಲೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.