ಗೋವಾದಿಂದ ಅಗ್ಗದ ಸರಾಯಿ ತಂದು ಮಾರಾಟ ಮಾಡುವ ಮೂಲಕ ಕಾರವಾರದಲ್ಲಿ ಬದುಕು ಕಟ್ಟಿಕೊಂಡಿದ್ದ ದಂಪತಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಸುರೇಶ ಕಲ್ಗುಟ್ಕರ್ ತಮ್ಮ ಪತ್ನಿ ಪಲ್ಲವಿ ಕಲ್ಗುಟ್ಕರ್ ಅವರನ್ನು ಪೊಲೀಸರಿಗೆ ಒಪ್ಪಿಸಿ ತಾವು ಪರಾರಿಯಾಗಿದ್ದಾರೆ!
ಕಾರವಾರದ ಕಡವಾಡ ಹಳೆಕೋಟದಲ್ಲಿ ಸುರೇಶ ಕಲ್ಗುಟ್ಕರ್ ಹಾಗೂ ಪಲ್ಲವಿ ಕಲ್ಗುಟ್ಕರ್ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದರು. ಆ ಅಂಗಡಿಯಲ್ಲಿ ಅಕ್ರಮ ಸರಾಯಿಯನ್ನು ಸಹ ಅವರು ಮಾರುತ್ತಿದ್ದರು. ಗೋವಾದಿಂದ ಕಡಿಮೆ ಬೆಲೆಗೆ ಬಗೆ ಬಗೆಯ ಬಾಟಲಿಗಳನ್ನು ತಂದು ಅದನ್ನು ಇಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಗೋವಾ ಸರಾಯಿ ಮಾರಾಟದಿಂದ ರಾಜ್ಯ ಸರ್ಕಾರದ ತೆರಿಗೆ ವಂಚನೆ ಆಗುತ್ತಿರುವುದನ್ನು ಅರಿತ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಅವರ ಅಂಗಡಿ ಮೇಲೆ ದಾಳಿ ಮಾಡಿದರು. ಜೂನ್ 17ರಂದು ಗ್ರಾಮೀಣ ಠಾಣೆ ಪಿಎಸ್‌ಐ ನೇಹಾಲ್ ಖಾನ್ ಅವರ ಅಂಗಡಿಗೆ ಭೇಟಿ ನೀಡಿದಾಗ 4050ರೂ ಮೌಲ್ಯದ ಗೋವಾ ಸರಾಯಿ ಸಿಕ್ಕಿತು. ಪೊಲೀಸರನ್ನು ಕಂಡ ಸುರೇಶ ಕಲ್ಗುಟ್ಕರ್ ತಮ್ಮ ಪತ್ನಿ ಪಲ್ಲವಿ ಕಲ್ಗುಟ್ಕರ್ ಅವರನ್ನು ಅಂಗಡಿಯಲ್ಲಿಯೇ ಬಿಟ್ಟು ಅಲ್ಲಿಂದ ಓಡಿದರು.
ಪಲ್ಲವಿ ಕಲ್ಗುಟ್ಕರ್ ಅವರ ಜೊತೆ ಗೋವಾ ಸರಾಯಿಯನ್ನು ಸಹ ಪೊಲೀಸರು ವಶಕ್ಕೆಪಡೆದಿದ್ದು, ದಂಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪತ್ನಿ ಬಿಟ್ಟು ಪರಾರಿಯಾದ ಸುರೇಶ ಕಲ್ಗುಟ್ಕರ್ ಹುಡುಕಾಟ ಮುಂದುವರೆದಿದೆ.