ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ ದೀಪಕ ಭಟ್ಟ ಹಾಗೂ ಡಾ ಸೌಮ್ಯಾ ಕೆ ವಿ ದಂಪತಿ ವರ್ಗಾವಣೆ ವಿರೋಧಿಸಿ ಬುಧವಾರ ಬಿಜೆಪಿ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಗೆ ಅನೇಕರು ಬೆಂಬಲವ್ಯಕ್ತಪಡಿಸಿದ್ದು, ಗ್ರಾಮೀಣ ಭಾಗದ ಜನ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಕಳೆದ 10 ವರ್ಷಗಳಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಸರ್ಕಾರ ವರ್ಗಾಯಿಸುತ್ತಿದೆ. ಈ ಹಿನ್ನಲೆ ಯಲ್ಲಾಪುರದ ಡಾ ದೀಪಕ ಭಟ್ಟ ಹಾಗೂ ಡಾ ಸೌಮ್ಯಾ ಕೆ ವಿ ಅವರ ವರ್ಗಾವಣೆಗೂ ಆದೇಶವಾಗಿದೆ. ಆದರೆ, ಯಲ್ಲಾಪುರದ ಜನ ಇದನ್ನು ವಿರೋಧಿಸಿದ್ದಾರೆ. `ಈ ವೈದ್ಯ ದಂಪತಿಯ ಸೇವೆ ಇಲ್ಲಿಯೇ ಮುಂದುವರೆಯಬೇಕು’ ಎಂದು ಒತ್ತಾಯಿಸಿದ್ದಾರೆ. ಜನಾಗ್ರಹಕ್ಕೆ ಮಣಿದ ಬಿಜೆಪಿ ವಿರೋಧ ಪಕ್ಷವಾಗಿ ಬುಧವಾರ ಪ್ರತಿಭಟನೆ ನಡೆಸಿದೆ. ಆ ಮೂಲಕ ವೈದ್ಯರನ್ನು ಇಲ್ಲಿಯೇ ಉಳಿಸಿಕೊಳ್ಳುವ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಿದೆ.
ಸರ್ಕಾರಿ ಆಸ್ಪತ್ರೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ಮಳೆಯಲ್ಲಿಯೇ ಮೆರವಣಿಗೆ ನಡೆಸಿದರು. ತಹಶೀಲ್ದಾರ್ ಕಚೇರಿಯವರೆಗೆ ಬಂದು ಸರ್ಕಾರದ ನಡೆಯ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೇಖಾ ಹೆಗಡೆ, ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಉಮೇಶ ಭಾಗ್ವತ, ರಾಘವೇಂದ್ರ ಭಟ್ಟ, ಚಂದ್ರಕಲಾ ಭಟ್ಟ, ಶ್ಯಾಮಿಲಿ ಪಾಟಣಕರ್, ರಾಮು ನಾಯ್ಕ, ದೋಂಡು ಪಾಟೀಲ ವೈದ್ಯರ ವರ್ಗಾವಣೆ ವಿರೋಧಿಸಿದರು. ಪ್ರಮುಖರಾದ ಸುಬ್ಬಣ್ಣ ಬೋಳ್ಮನೆ, ಶಿವಲಿಂಗಯ್ಯ ಅಲ್ಲಯ್ಯನವರಮಠ, ಶ್ರುತಿ ಹೆಗಡೆ, ಗಣಪತಿ ಬೋಳಗುಡ್ಡೆ, ನಾರಾಯಣ ನಾಯಕ, ರವಿ ಕೈಟ್ಕರ್, ಗಾಂಧಿ ಸೋಮಾಪುರಕರ್, ಸೋಮೇಶ್ವರ ನಾಯ್ಕ ಇತರರು `ವೈದ್ಯರ ವರ್ಗಾವಣೆಗೆ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಾರಣ’ ಎಂದು ಮಾತನಾಡಿಕೊಂಡರು.
`ಬಡವರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಮೂಲಕ ಯಲ್ಲಾಪುರ ಆಸ್ಪತ್ರೆ ರಾಜ್ಯಮಟ್ಟದಲ್ಲಿ ಒಳ್ಳೆಯ ಹೆಸರುಗಳಿಸಿದೆ. ಇದಕ್ಕೆ ಡಾ ದೀಪಕ ಭಟ್ಟ ಹಾಗೂ ಡಾ ಸೌಮ್ಯ ಕೆವಿ ಕಾರಣರಾಗಿದ್ದು, ಅವರ ವರ್ಗಾವಣೆ ರದ್ಧುಗೊಳಿಸಬೇಕು’ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಒತ್ತಾಯಿಸಿದರು. `ಕಡ್ಡಾಯ ವರ್ಗಾವಣೆಯ ಪಟ್ಟಿಯಲ್ಲಿದ್ದ ಬೇರೆ ಬೇರೆ ತಾಲೂಕಿನ ವೈದ್ಯರ ಹೆಸರು ಆ ಪಟ್ಟಿಯಿಂದ ರದ್ಧಾಗಿದೆ. ಅದರಂತೆ ಇಲ್ಲಿಯೂ ಆಗಬೇಕು’ ಎಂದು ಆಗ್ರಹಿಸಿದರು. ಬೇಡಿಕೆ ಈಡೇರದೇ ಇದ್ದರೆ ಇನ್ನಷ್ಟು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.