ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಷಾಢ ಏಕಾದಶಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆದವು.
ದೇವಸ್ಥಾನದ ಪುರೋಹಿತ ಡಾ.ಶಂಕರ ಭಟ್ಟ ಬಾಲೀಗದ್ದೆ ಅವರ ಮಾರ್ಗದರ್ಶನದಲ್ಲಿ ಸಾಮೂಹಿಕ ತುಳಸಿ ಅರ್ಚನೆ ನಡೆಯಿತು. ಸೇರಿದ್ದ ನೂರಾರು ಭಕ್ತರು ವಿಷ್ಣು ಸಹಸ್ರನಾಮ, ಅಷ್ಟೋತ್ತರ ಶತನಾಮ, ಕೃಷ್ಣ ಅಷ್ಟೋತ್ತರ ಶತನಾಮ ಪಠಣದೊಂದಿಗೆ ತುಳಸಿ ಅರ್ಚನೆ ನೆರವೇರಿಸಿದರು. ಕಾರ್ಯಕ್ರಮದ ಪ್ರಯುಕ್ತ ದೇವರಿಗೆ ತುಳಸಿಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ಈ ವೇಳೆ ಮಾತನಾಡಿದ ಶಂಕರ ಭಟ್ಟ ಬಾಲೀಗದ್ದೆ, ವಿಷ್ಣು ಯೋಗನಿದ್ರೆಗೆ ಜಾರುವ ಪರ್ವಕಾಲದಲ್ಲಿ ದೇವತಾರಾಧನೆಯಲ್ಲಿ ತೊಡಗುವುದರಿಂದ ಶ್ರೇಯಸ್ಸು ದೊರೆಯುತ್ತದೆ. ವಿಷ್ಣುವಿನ ನಾಮಸ್ಮರಣೆ ಬದುಕಿನಲ್ಲಿ ಯಶಸ್ಸು ತಂದುಕೊಡುತ್ತದೆ ಎಂದರು.
ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಭಟ್ಟ ಬಿದ್ರೆಪಾಲ, ಉಪಾಧ್ಯಕ್ಷ ಸುಹಾಸ ಭಾಗ್ವತ, ಕಾರ್ಯದರ್ಶಿ ಮಹಾಬಲೇಶ್ವರ ಭಾಗ್ವತ, ಮೊಕ್ತೇಸರ ಗೋಪಾಲಕೃಷ್ಣ ಭಟ್ಟ ವೈದಿಕರಮನೆ ಇತರರಿದ್ದರು.