ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಹುಬ್ನಳ್ಳಿಯಿಂದ ರಾಮಶೆಟ್ಟಿಕೊಪ್ಪಕ್ಕೆ ಸಂಪರ್ಕ ಕಲ್ಪಿಸುವ ಕಾಲು ಸಂಕವನ್ನು ಶೌರ್ಯ ತಂಡದವರು ಹಾಗೂ ಸ್ಥಳೀಯರು ಶ್ರಮದಾನದ ಮೂಲಕ ದುರಸ್ತಿಪಡಿಸಿದರು.
ಮೂರು ದಿನಗಳ ಹಿಂದೆ ಜೋರಾದ ಮಳೆಯಿಂದಾಗಿ ಕಾಲು ಸಂಕ ಕುಸಿದು ಸಂಚಾರಕ್ಕೆ ತೊಂದರೆಯಾಗಿತ್ತು. ಹುಬ್ನಳ್ಳಿ, ವೈಲವಾಡಿ, ನಾಯ್ಕರಕೇರಿ, ತಾಲಿಬೇಣ, ರಾಮಶೆಟ್ಟಿಕೊಪ್ಪಕ್ಕೆ ಸಂಪರ್ಕ ಕಲ್ಪಿಸುವ ಈ ಕಾಲುಸಂಕ ಕುಸಿದಿರುವುದರಿಂದ ನಿತ್ಯದ ಓಡಾಟಕ್ಕೆ ಗ್ರಾಮಸ್ಥರು, ವಿದ್ಯಾರ್ಥಿಗಳು ಪರದಾಡುವಂತಾಗಿತ್ತು.
ಸಮಸ್ಯೆ ಅರಿತ ಚಂದಗುಳಿ ಗ್ರಾ.ಪಂ ಸದಸ್ಯ ಹಾಗೂ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ ಕಾಲು ಸಂಕ ದುರಸ್ತಿಗೆ ಬೊಡ್ರಸ್ ಕಲ್ಲು ನೀಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಕಾಲು ಸಂಕ ದುರಸ್ತಿ ಮಾಡಿದ್ದು, ಮತ್ತೆ ಓಡಾಡಕ್ಕೆ ಅನುಕೂಲವಾಗಿದೆ.