ಯಲ್ಲಾಪುರ: ಪಟ್ಟಣದ ತಹಸೀಲ್ದಾರ ಕಚೇರಿಯ ಜಿಡ್ಡುಗಟ್ಟಿದ ವ್ಯವಸ್ಥೆಯಿಂದ ಜನಸಾಮಾನ್ಯರು ಹೈರಾಣಾಗುವಂತಾಗಿದೆ. ತಿಂಗಳುಗಟ್ಟಲೆ ಅಲೆದರೂ ಆ ಕೆಲಸ ಆಗುತ್ತದೆ ಎಂಬ ನಂಬಿಕೆ ಇಲ್ಲ.
ಇದಕ್ಕೊಂದು ತಾಜಾ ಉದಾಹರಣೆಯೆಂದರೆ, ನಂದೊಳ್ಳಿಯ ರೈತರೊಬ್ಬರು ಕಳೆದ ಜೂನ್ 3 ರಂದು ತಹಸೀಲ್ದಾರ ಕಚೇರಿಯಲ್ಲಿ ಅರ್ಜಿಯೊಂದನ್ನು ಕೊಟ್ಟಿದ್ದರು. ತಮ್ಮ ಜಮೀನಿನ ವಾರಸಾ ಎಂಟ್ರಿ, ಉತಾರ ಹಾಗೂ ಹೆಣ್ಣುಮಕ್ಕಳ ಹೇಳಿಕೆಯ ಉತಾರ ನೀಡುವಂತೆ ಅರ್ಜಿ ನೀಡಿದ್ದರು.
ತಹಸೀಲ್ದಾರ ಕಚೇರಿಯಲ್ಲೇ ಸಿಗುವ ಈ ದಾಖಲೆಯನ್ನು ನೀಡಲು ಅಲ್ಲಿನ ಸಿಬ್ಬಂದಿ ಒಂದು ತಿಂಗಳು ಅಲೆದಾಡಿಸಿದ್ದಾರೆ. 2-3 ಬಾರಿಯ ಅಲೆದಾಟದ ನಂತರ ‘ನಿಮ್ಮೂರಿನ ಗ್ರಾಮ ಲೆಕ್ಕಿಗರಿಗೆ ಈ ದಾಖಲೆ ಕಳುಹಿಸುತ್ತೇವೆ, ಅವರಿಂದ ಪಡೆದುಕೊಳ್ಳಿ’ ಎಂದು ಹೊಸ ಸಬೂಬು ಹೇಳಿದ್ದಾರೆ. ಆ ರೈತ ಗ್ರಾಮ ಲೆಕ್ಕಿಗರನ್ನು ಕೇಳಿದಾಗ ‘ತಹಸೀಲ್ದಾರ ಕಚೇರಿಯಲ್ಲೇ ಇರುವ ದಾಖಲೆ, ಅಲ್ಲೇ ದೊರಕುತ್ತದೆ. ನಮಗೆ ಕೊಡುವ ಅಧಿಕಾರವಿಲ್ಲ’ ಎಂದು ಉತ್ತರಿಸಿದ್ದಾರೆ. ಆಗ ತಹಸೀಲ್ದಾರ ಕಚೇರಿಯ ಸಿಬ್ಬಂದಿಯ ಅಸಲಿಯತ್ತು ಬೆಳಕಿಗೆ ಬಂದಿದೆ.
ಮತ್ತೆ ಬಂದು ತಹಸೀಲ್ದಾರ ಕಚೇರಿಯಲ್ಲಿ ಕೇಳಿದಾಗ ಬರೋಬ್ಬರಿ ಒಂದು ತಿಂಗಳು ಸತಾಯಿಸಿ ಕೊನೆಗೂ ದಾಖಲೆ ನೀಡಲಾಗಿದೆ. ದುಡ್ಡು ಕೊಟ್ಟರೆ ಕೆಲಸ ಬೇಗ ಆಗುತ್ತದೆ ಎಂಬುದು ರಹಸ್ಯ ವಿಚಾರವೇನಲ್ಲ!
ಇದು ಕೇವಲ ಒಂದು ಉದಾಹರಣೆ ಮಾತ್ರ. ಅನಗತ್ಯವಾಗಿ ಜನರನ್ನು ಅಲೆದಾಡಿಸುವ ಇಂತಹ ಹತ್ತಾರು ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಲೇ ಇವೆ. ಜನರನ್ನು ಅಲೆದಾಡಿಸುವ ಕೆಲವು ಸಿಬ್ಬಂದಿಗಳಿಂದಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ನೌಕರರಿಗೂ ಕೆಟ್ಟ ಹೆಸರು ಬರುವಂತಾಗಿದೆ.
ಹೇಳುವವರು, ಕೇಳುವವರು ಯಾರೂ ಇಲ್ಲ ಎಂಬಂತಹ ಈ ಅವ್ಯವಸ್ಥೆಗೆ ಕಡಿವಾಣ ಹಾಕುವುದು ಯಾವಾಗ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಇಲ್ಲ.