ಯಲ್ಲಾಪುರ: ಕನ್ನಡ ಸಂಸ್ಕೃತಿ ಇಲಾಖೆ ಕಾರವಾರ ಹಾಗೂ ತೇಲಂಗಾರದ ಮೈತ್ರಿ ಕಲಾ ಬಳಗಗಳ ಆಶ್ರಯದಲ್ಲಿ ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ನಡೆದ ಚಿಗುರು ಕಾರ್ಯಕ್ರಮ ಗಮನ ಸೆಳೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳ ಹಿಂದುಸ್ತಾನಿ ಸಂಗೀತ, ಜಾನಪದ ನೃತ್ಯ, ಸುಗಮ ಸಂಗೀತ, ನೃತ್ಯ ರೂಪಕ, ನಾಟಕ, ಏಕಪಾತ್ರಾಭಿನಯ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮ ಉದ್ಘಾಟಿಸಿದ ಗ್ರಾ.ಪಂ ಅಧ್ಯಕ್ಷ ಭಗೀರಥ ನಾಯ್ಕ, ಎಳೆಯ ಮನಸ್ಸಿನ ಭಾವಕ್ಕೆ ತಕ್ಕಂತೆ ಸಾಂಸ್ಕೃತಿಕ ಜಗುಲಿಯ ಅವಕಾಶಗಳು ಒದಗಿ ಬರಬೇಕು. ಹಾಗಿದ್ದಾಗ ಮಾತ್ರ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದರು.
ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಮಾತನಾಡಿ,’ ಮಕ್ಕಳ ಸಾಂಸ್ಕೃತಿಕ ಕ್ಷೇತ್ರ ಬಡವಾಗುತ್ತಿದೆ. ಮಕ್ಕಳ ಪ್ರತಿಭೆಯನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.
ಶಿಕ್ಷಣ ಸಮಿತಿಯ ಕಾರ್ಯದರ್ಶಿ ಅಪ್ಪಣ್ಣ ಭಟ್ಟ ಬೆಣ್ಣೆಜಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಉಪಾಧ್ಯಕ್ಷ ಟಿ.ಸಿ ಗಾಂವ್ಕರ್, ಆದರ್ಶ ಸೇವಾ ಸಹಕಾರಿ ಸಂಘ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ, ಗ್ರಾಪಂ ಉಪಾಧ್ಯಕ್ಷೆ ಗಂಗಾ ಕೋಮಾರ, ಮುಖ್ಯಾಧ್ಯಾಪಕ ಎಂ ಕೆ ಭಟ್ಟ, ಶಿಕ್ಷಕರಾದ ಸರೋಜಾ ಭಟ್ಟ, ಚಿದಾನಂದ ಹಳ್ಳಿ, ಗಿರೀಶ ಹೆಬ್ಬಾರ ಭಾಗವಹಿಸಿದ್ದರು.
ಶೈಕ್ಷಣಿಕ ಸಾಧನೆಗಾಗಿ ದೀಕ್ಷಾ ದತ್ತಾತ್ರೇಯ ಭಟ್ಟ ಅವಳನ್ನು ಪುರಸ್ಕರಿಸಲಾಯಿತು. ಮೈತ್ರಿ ಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ ಆಶಯ ನುಡಿಗಳನ್ನಾಡಿದರು. ಕಾರ್ಯದರ್ಶಿ ಮಂಜುನಾಥ ಗಾಂವ್ಕರ ಮೂಲೆಮನೆ ವಂದಿಸಿದರು.