ಯಲ್ಲಾಪುರ: ತಾಲೂಕಿನ ಕಣ್ಣಿಗೇರಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಶಾಲೆಯ ಕಂಪೌಂಡ್ ವಿಚಾರಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದೆ.
ಶಾಲೆಯ ಕಂಪೌಂಡ್ ಒಡೆದ ವಿಚಾರವನ್ನು ಗ್ರಾಮಸಭೆಯಲ್ಲಿ ಪ್ರಶ್ನಿಸಿದ್ದಕ್ಕಾಗಿ ಭಾಸ್ಕರ ಭೀಮ ಮಾಪ್ಸೇಕರ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ.
ಕಣ್ಣಿಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡನ್ನು ಇಲಾಖೆಗೆ ಮಾಹಿತಿ ನೀಡದೇ ಒಡೆದಿರುವ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿ ಉತ್ತರಿಸುತ್ತಿರುವ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಗ್ರಾ.ಪಂ ಸದಸ್ಯ ವಾಸುದೇವ ಮಾಪ್ಸೇಕರ್, ಸ್ಥಳೀಯರಾದ ಕಾಮೇಶ್ವರ ಮಾಪ್ಸೇಕರ್, ಸಿದ್ದೇಶ್ವರ ಮಾಪ್ಸೇಕರ್ ಅವರು ಭಾಸ್ಕರ ಅವರ ಮೇಲೆ ಕುರ್ಚಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ.
ಸಭೆಯಲ್ಲಿ ಗದ್ದಲವಾಗುತ್ತಿದ್ದಂತೆ ನೋಡೆಲ್ ಅಧಿಕಾರಿ ನರೇಶ.ಜಿ.ಬಿ ಹಾಗೂ ಪಿಡಿಒ ಎಚ್.ಸಿ ವಿರಕ್ತಿಮಠ ಮಧ್ಯಪ್ರವೇಶಿಸಿ ಗಲಾಟೆ ನಿಯಂತ್ರಿಸಿದರು.
ನಂತರ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಇಲಾಖೆಗೆ ಮಾಹಿತಿ ನೀಡದೇ ಕಂಪೌಂಡ್ ಒಡೆದಿರುವುದು ಸರಿಯಲ್ಲ. ಅದನ್ನು ಸರಿಪಡಿಸಿ ಕ್ರಮ ಕೈಗೊಳ್ಳಬೇಕೆಂದು ಎಸ್.ಡಿ.ಎಂ.ಸಿಯವರಿಗೆ ಸೂಚಿಸಿದರು.
ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಭಾಸ್ಕರ ಮಾಪ್ಸೇಕರ್ ಯಲ್ಲಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.