ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನ, ಸಾತ್ವಿಕ ಫೌಂಡೇಶನ್ ಹಾಗೂ ಮಂಚೀಕೇರಿ ವಲಯ ಅರಣ್ಯ ಇಲಾಖೆಗಳ ಆಶ್ರಯದಲ್ಲಿ ಸುಮೇರು ಜ್ಯೋತಿರ್ವನದಲ್ಲಿ ‘ಅಕ್ಷರಕ್ಕೊಂದು ವೃಕ್ಷ ಬೆಳೆಸೋಣ ಬನ್ನಿ’ ಕಾರ್ಯಕ್ರಮ ನಡೆಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಡಿ.ಬಿರಾದಾರ, ಕಾರ್ಯಕ್ರಮ ಸಂಯೋಜಕ ಡಾ.ಕೆ.ಸಿ.ನಾಗೇಶ ಭಟ್ಟ ಅವರು ಅ ಅಕ್ಷರದ ಶ್ರೀಗಂಧ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. 75 ಕ್ಕೂ ಹೆಚ್ಚು ಜನ 50 ಅಕ್ಷರಗಳಿಗೆ ಸಂಬಂಧಿಸಿದ ಗಿಡಗಳನ್ನು ನೆಟ್ಟರು.
ವೃಕ್ಷ ಸಂಸರ್ಗ, ಸೇವೆ ಯಿಂದ ಪರೋಪಕಾರ ಬುದ್ಧಿ ಬೆಳೆಯುತ್ತದೆ. ಅಕ್ಷರ ವೃಕ್ಷ ಸೇವೆಯಿಂದ ವಿದ್ಯಾ ಪ್ರಗತಿ, ಆರೋಗ್ಯ ವೃದ್ಧಿ ಸಾಧ್ಯ. ವೃಕ್ಷಗಳು ಮಾನವನಿಗಿಂತ ಮೂರು ಯುಗಗಳಷ್ಟು ಮೊದಲೇ ಸೃಷ್ಟಿಯಾಗಿವೆ. ವೃಕ್ಷ ಸೇವೆಯನ್ನು ಎಲ್ಲರೂ ಮಾಡುವಂತಾಗಬೇಕೆಂಬ ಆಶಯ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.
ನಂತರ ನಡೆದ ಸಭೆಯಲ್ಲಿ ಮಾತನಾಡಿದ ಡಿಸಿಎಫ್ ಹರ್ಷ ಭಾನು, ಸನಾತನ ಧರ್ಮ, ಜಾನಪದ ನುಡಿಗಳನ್ನು ಅನುಸರಿಸಿ ಮುನ್ನಡೆದರೆ ಪ್ರಕೃತಿ ಸಂರಕ್ಷಣೆ ಸಾಧ್ಯ. ಈ ನಿಟ್ಟಿನಲ್ಲಿ ಸುಮೇರು ಜ್ಯೋತಿರ್ವನವು ಕೈಗೊಳ್ಳುತ್ತಿರುವ ಕಾರ್ಯಗಳು ಶ್ಲಾಘನೀಯ. ಎಲ್ಲರೂ ಇಂತಹ ಕಾರ್ಯಕ್ಕೆ ಸಹಕರಿಸಬೇಕು ಎಂದರು.
ಡಾ.ಬಿ.ಡಿ.ಬಿರಾದಾರ ಮಾತನಾಡಿ, ಇಂತಹ ಮೌಲ್ಯಯುತ, ಧಾರ್ಮಿಕ, ವೈಜ್ಞಾನಿಕ ಕಾರ್ಯಗಳು ಸಮಾಜಕ್ಕೆ ಬೇಕು. ನಮ್ಮ ವಿಶ್ವವಿದ್ಯಾಲಯದಲ್ಲೂ ಅಮೃತವನವನ್ನು ನಿರ್ಮಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಪರಿಸರ ಬರಹಗಾರ ಶಿವಾನಂದ ಕಳವೆ, ವಿಜ್ಞಾನಿ ಡಾ.ಕೇಶವ ಹೆಗಡೆ ಕೊರ್ಸೆ, ತಜ್ಞರಾದ ಪ್ರಕಾಶ ಅಡೆಮನೆ, ಪ್ರಕಾಶ ಮಂಚಾಲೆ, ಉಮಾಪತಿ ಭಟ್ಟ ಶಿರಸಿ, ರಾಮಚಂದ್ರ ಹೆಗಡೆ, ಸಂಸ್ಥೆಯ ಅಧ್ಯಕ್ಷೆ ಡಾ.ನಿವೇದಿತಾ ಭಟ್ಟ ಇತರರಿದ್ದರು.
ಜ್ಯೋತಿರ್ವಿಜ್ಞಾನ ಗುರುಕುಲದ ವಿದ್ಯಾರ್ಥಿಗಳಾದ ಕಾರ್ತಿಕ್ ಸ್ವಾಗತಿಸಿದರು. ಅಮೋಘ ಶರ್ಮಾ ನಿರ್ವಹಿಸಿದರು. ಮಹೇಶ ಭಟ್ ವಂದಿಸಿದರು.