ಕರಡಿ ದಾಳಿಯಿಂದ ರೈತ ಗಂಭೀರವಾಗಿ ಗಾಯಗೊಂಡ ಘಟನೆ ಜೊಯಿಡಾ ತಾಲೂಕಿನ ರಾಮನಗರದ ನಾನೆಗಾಳಿ ಬಳಿ ನಡೆದಿದೆ.
ರಾಮನಗರದ ಹನುಮಾನ ಗಲ್ಲಿಯ ರೈತ ಮಾರುತಿ ಮಳೇಕರ ಗಾಯಗೊಂಡವರು. ಮಂಗಳವಾರ ಸಂಜೆ ಸಿಂರಗಾಂವ ಗ್ರಾಮ ಪಂಚಾಯತ ಪ್ರದೇಶದ ನಾನೆಗಾಳಿಯಲ್ಲಿರುವ ತನ್ನ ಹೊಲದಲ್ಲಿ ಕೆಲಸ ಮಾಡಿ ರಾಮನಗರದ ಹನುಮಾನ ಗಲ್ಲಿಯ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮಾರುತಿ ಮಳೇಕರ ತನ್ನ ಹೊಲದಿಂದ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕರಡಿ ಹಠಾತ್ತನೆ ದಾಳಿ ನಡೆಸಿ, ತಲೆಗೆ ಗಂಭೀರವಾಗಿ ಗಾಯಗೊಳಿಸಿದ್ದು, ಕೈ ಹಾಗೂ ಕಾಲುಗಳಿಗೆ ಬಲವಾಗಿ ಗಾಯಗೊಳಿಸಿದೆ.
ಗಾಯಾಳು ಮಾರುತಿ ಅವರನ್ನು ರಾಮನಗರ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಆಸ್ಪತ್ರೆಗೆ ರವಾನಿಸಲಾಗಿದೆ.