ಯಲ್ಲಾಪುರ ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ಹಾಳಾದ ಲಾರಿಯನ್ನು ತೆಗೆದುಕೊಂಡು ಬರುತ್ತಿದ್ದ ಕ್ರೇನ್ ಎಕ್ಸೆಲ್ ತುಂಡಾಗಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳ್ಳುವಂತಾಯಿತು.
ಹಾಳಾಗಿದ್ದ ಲಾರಿಯೊಂದನ್ನು ಗುಳ್ಳಾಪುರ ಕಡೆಯಿಂದ ಯಲ್ಲಾಪುರಕ್ಕೆ ಕ್ರೇನ್ ಮೂಲಕ ತೆಗೆದುಕೊಂಡು ಬರಲಾಗುತ್ತಿತ್ತು. ಆರತಿಬೈಲ್ ಘಟ್ಟದ ಬಳಿ ಕ್ರೇನ್ ನ ಎಕ್ಸಲ್ ಏಕಾಏಕಿ ತುಂಡಾಗಿದ್ದು ರಸ್ತೆ ಮಧ್ಯೆ ಕ್ರೇನ್ ಮತ್ತು ಲಾರಿ ನಿಂತಿದೆ.
ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡು ತಾಸುಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಸ್ಥಳಕ್ಕೆ ಬಂದ ಪೊಲೀಸರು ಯಲ್ಲಾಪುರದಿಂದ ಮತ್ತೊಂದು ಕ್ರೇನ್ ಕರೆಸಿ, ಲಾರಿ ತೆರವುಗೊಳಿಸಲು ಕ್ರಮ ಕೈಗೊಂಡರು.
ಎಕ್ಸಲ್ ಕಟ್ ಆದ ಕ್ರೇನ್ ರಸ್ತೆಯ ಮೇಲೆ ಇರುವುದರಿಂದ, ರಸ್ತೆಯ ಒಂದು ಬದಿಯಲ್ಲಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ.