ಮುಂಡಗೋಡ ತಾಲೂಕು ಕೋಡಂಬಿ ಗ್ರಾ.ಪಂ ವ್ಯಾಪ್ತಿಯ ಹಳ್ಳದಮನೆ ಅರಣ್ಯದಲ್ಲಿ ಬಹಿರ್ದೆಸೆಗೆ ಕುಳಿತಿದ್ದ ವ್ಯಕ್ತಿಯ ಮೇಲೆ ಕರಡಿಗಳು ದಾಳಿ ನಡೆಸಿವೆ.
ಹಳ್ಳದಮನೆ ನಿವಾಸಿ ದೇವರಾಜ್ ನಿಂಗಪ್ಪ ಡೊಳ್ಳೇಶ್ವರ ಗಾಯಗೊಂಡ ವ್ಯಕ್ತಿ. ಇವರು ತಮ್ಮ ಮನೆಯಿಂದ ಸುಮಾರು 1 ಕಿ.ಮೀ. ದೂರದಲ್ಲಿರುವ ಮಂಜುನಾಥ ಎಂಬವರ ಮನೆಗೆ ತೋಟದ ಕೆಲಸಕ್ಕೆಂದು ಹೊರಟಿದ್ದರು. ಹಳ್ಳದಮನೆ ಅರಣ್ಯದ ಕಾಲು ದಾರಿಯಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಕಾಡಿನಲ್ಲಿದ್ದ ನೀರಿನ ಹೊಂಡದ ಬಳಿ ಬಹಿರ್ದೆಸೆಗೆಂದು ಕುಳಿತಿದ್ದಾಗ ಎರಡು ಕರಡಿಗಳು ಹಿಂಭಾಗದಿಂದ ಬಂದು ದಾಳಿ ನಡೆಸಿವೆ.
ಅದರಲ್ಲಿ ಒಂದು ಕರಡಿ ದೇವರಾಜ್ ಅವರ ಮೈಕೈ ಹೊಟ್ಟೆಯ ಭಾಗದಲ್ಲಿ ಉಗುರುಗಳಿಂದ ಪರಚಿ, ಕಚ್ಚಿ ಗಾಯಗೊಳಿಸಿದೆ. ದೇವರಾಜ ಜೋರಾಗಿ ಕಿರುಚಿಕೊಂಡ ನಂತರ ಕರಡಿಗಳು ಕಾಡಿನೊಳಕ್ಕೆ ಹೋಗಿದ್ದು, ಅಲ್ಲಿಂದ ನಡೆದುಕೊಂಡು ಮುಖ್ಯ ರಸ್ತೆಗೆ ಬಂದಿದ್ದಾರೆ. ಸಂಬಂಧಿಕರು ಹಾಗೂ ಗ್ರಾಮಸ್ಥರು ಆತನನ್ನು ಚಿಕಿತ್ಸೆಗಾಗಿ ಶಿರಸಿ ಮಾರಿಕಾಂಬಾ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.





