ಯಲ್ಲಾಪುರ: ಅತಿಯಾದ ಮಳೆಯಿಂದ ಹಾಳಾಗಿದ್ದ ರಾಮಾಪುರದ ರಸ್ತೆಯನ್ನು ಊರಿನ ಯುವಕರೇ ಶ್ರಮದಾನದ ಮೂಲಕ ದುರಸ್ತಿ ಮಾಡಿದ್ದಾರೆ.
ಕಳೆದ ವಾರ ಜೋರಾದ ಮಳೆಯಿಂದಾಗಿ ರಸ್ತೆ ಕುಸಿದು, ಓಡಾಟಕ್ಕೆ ತುಂಬಾ ಸಮಸ್ಯೆಯಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತುರ್ತಾಗಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದರು.
ಆದರೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಯುವಕರೇ ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಿಕೊಂಡಿದ್ದಾರೆ. ಸಂತೋಷ ಮರಾಠಿ, ಕಮಲೇಶ ದೇಸಾಯಿ, ಅಶೋಕ, ಗಣಪತಿ, ಚಂದ್ರಕಾಂತ ಮರಾಠಿ, ಮಂಜುನಾಥ, ದಾಮೋದರ, ಬಾಲು ಪಂಡರಪುರ, ಸುಬ್ರಹ್ಮಣ್ಯ, ಅಣ್ಣಪ್ಪ ಮರಾಠಿ, ಗಣೇಶ ಪಂಡರಪುರ ಇತರರು ರಸ್ತೆ ದುರಸ್ತಿ ಕಾರ್ಯದಲ್ಲಿ ಭಾಗವಹಿಸಿದ್ದರು.
ಪಟ್ಟಣ ಪಂಚಾಯಿತಿ ಸದಸ್ಯೆ ಕಲ್ಪನಾ ನಾಯ್ಕ ಅವರು, ರಸ್ತೆ ದುರಸ್ತಿಗಾಗಿ ಬಳಸಿದ ಸಾಮಗ್ರಿಗಳ ಖರ್ಚು ವೆಚ್ಚಗಳನ್ನು ಪಟ್ಟಣ ಪಂಚಾಯಿತಿಯಿಂದ ಭರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.





