ಯಲ್ಲಾಪುರದ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ 60 ನೇ ವಾರ್ಷಿಕ ಸರ್ವಸಾಧಾರಣ ಸಭೆ ಜುಲೈ 23 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ನಂತರ ಪ್ರಸಿದ್ಧ ಕಲಾವಿದರಿಂದ ಜ್ವಾಲಾ ಪ್ರತಾಪ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸೊಸೈಟಿ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಮಾಹಿತಿ ನೀಡಿದರು. ಕಳೆದ ಆರ್ಥಿಕ ಸಾಲಿನಲ್ಲಿ 5.22 ಕೋಟಿ ರೂ ಲಾಭ ಗಳಿಸಿದೆ. ಕೇವಲ ಲಾಭದ ದೃಷ್ಟಿಯಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿಲ್ಲ. ಸದಸ್ಯ ರೈತರ ಅಗತ್ಯತೆಗಳನ್ನು ತಿಳಿಯುತ್ತ, ಅವರಿಗೆ ಅನುಕೂಲ ಕಲ್ಪಿಸುತ್ತ ರೈತರನ್ನು ಬೆಳೆಸುತ್ತ, ಸಂಸ್ಥೆಯೂ ಬೆಳೆಯುತ್ತಿದೆ ಎಂದರು.
ರೈತರಿಗಾಗಿ ಆರೋಗ್ಯ ಸುರಕ್ಷಾ ವಿಮೆ ನೀಡುತ್ತಿದ್ದೇವೆ. ಕಳೆದ ಸಾಲಿನಲ್ಲಿ 278 ಸದಸ್ಯರು ಇದರ ಲಾಭ ಪಡೆದಿದ್ದು, 51.60 ಲಕ್ಷ ರೂ ವಿಮೆ ನೀಡಲಾಗಿದೆ ಎಂದರು.
ಉಪಾಧ್ಯಕ್ಷ ನರಸಿಂಹ ಕೋಣೆಮನೆ ಮಾತನಾಡಿ, ರೈತರ ವಿಶ್ವಾಸ, ಪ್ರೀತಿಯಿಂದ ಸಂಸ್ಥೆಯು ಅಡಕೆ ವ್ಯವಹಾರದಲ್ಲಿ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಗತಿ ಸಾಧಿಸುತ್ತಿದೆ. ಎಪಿಎಂಸಿ ಆವಾರದಲ್ಲಿ 10 ಗುಂಟೆ ಜಾಗ ಸರ್ಕಾರದಿಂದ ಮಂಜೂರಿಯಾಗಿದೆ. ಆ ಜಾಗದಲ್ಲಿ ಅಡಕೆಯನ್ನು ಇಡಲು ಸುಸಜ್ಜಿತ ಗೋದಾಮು ನಿರ್ಮಿಸುವ ಯೋಜನೆಯಿದೆ ಎಂದರು.
ಪೆಟ್ರೊಲ್ ಪಂಪ್ ಗೆ ಟ್ಯಾಂಕರ್ ಖರೀದಿ, ಸೂಪರ್ ಮಾರ್ಕೆಟ್ ಆರಂಭ ಸೇರಿದಂತೆ ಅನೇಕ ದಿಟ್ಟ ನಿರ್ಣಯಗಳನ್ನು ಕೈಗೊಂಡಿದ್ದು, ಸದಸ್ಯರೆಲ್ಲ ನಮ್ಮ ಕೈಹಿಡಿದಿದ್ದಾರೆ. ಎಲ್ಲ ವ್ಯವಹಾರಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ವಿವರಿಸಿದರು.
ನಿರ್ದೇಶಕರಾದ ವೆಂಕಟರಮಣ ಬೆಳ್ಳಿ, ಸುಬ್ಬಣ್ಣ ಬೋಳ್ಮನೆ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ಮುಖ್ಯಕಾರ್ಯನಿರ್ವಾಹಕ ವಿ.ಟಿ.ಹೆಗಡೆ ತೊಂಡೆಕೆರೆ ಇತರರಿದ್ದರು.




