ಯಲ್ಲಾಪುರ: ಅರಣ್ಯ ಅತಿಕ್ರಮಣ ಮಂಜೂರಿಗಾಗಿ ಅರ್ಜಿ ಸಲ್ಲಿಸಿ, ಜಿಪಿಎಸ್ ಆದ ಹಳೆಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವುದಿಲ್ಲ ಎಂಬ ಅರಣ್ಯ ಇಲಾಖೆಯ ಮಾತು ಕೇವಲ ಭಾಷಣಕ್ಕೆ ಸೀಮಿತವೇ? ಹೀಗೊಂದು ಪ್ರಶ್ನೆ ಮೂಡಲುಬಕಾರಣವಾದದ್ದು ಉಚಗೇರಿಯ ರಾಜೀವಾಡದಲ್ಲಿ ನಡೆದ ಘಟನೆ.
ರಾಜೀವಾಡದಲ್ಲಿ ಸೈನಿಕನ ಕುಟುಂಬದ, ಜಿ.ಪಿ.ಎಸ್ ಆಗಿರುವ ಅತಿಕ್ರಮಣದ ಜಮೀನಿನ ಗದ್ದೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ನಾಶ ಮಾಡಿ, ಬೆಳೆ ಹಾನಿ ಮಾಡಿದ್ದಾರೆ. ಅರಣ್ಯ ಇಲಾಖೆಯ ಈ ಕ್ರಮದ ಬಗ್ಗೆ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೀರು ಸಕ್ಕು ತೋರವತ್ ಅವರು ಬೆಂಗಳೂರಿನ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರದ ಮೂಲಕ ದೂರಿದ್ದಾರೆ.
ನಮ್ಮ ತಂದೆ ಸಕ್ಕು ಬಾಬು ತೋರವತ್ ಅವರ ಅಧಿಕೃತವಾಗಿ ಜಿ.ಪಿ.ಎಸ್ ಆಗಿರುವ ಜಮೀನಿನಲ್ಲಿ ಅಣ್ಣ ಹಾಗೂ ತಮ್ಮಂದಿರು ಚಿಪಗೇರಿ ಅರಣ್ಯ ಸ.ನಂ 2 ರಲ್ಲಿ 2 ಎಕರೆ ಕ್ಷೇತ್ರ ಅತಿಕ್ರಮಣ ಮಾಡಿ ಸಾಗುವಳಿ ಮಾಡುತ್ತಿದ್ದಾರೆ. ಭತ್ತ ಬೆಳೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.
2 ಎಕರೆ ಅತಿಕ್ರಮಣ ಕ್ಷೇತ್ರ ಅಧಿಕೃತವಾಗಿ 2014 ರಲ್ಲಿ ಜಿಪಿಎಸ್ ಆಗಿದೆ. ಕಳೆದ ಜೂನ್ ತಿಂಗಳಲ್ಲಿ ರಜೆಗೆಂದು ಊರಿಗೆ ಬಂದಾಗ ಅಣ್ಣ ತಮ್ಮಂದಿರೊಂದಿಗೆ ಭತ್ತದ ನಾಟಿ ಮಾಡಲು ಭೂಮಿ ಹದಗೊಳಿಸಿ, ಬೀಜ ಬಿತ್ತಿ, ರಕ್ಷಣೆಗೆ ಬೇಲಿ ಮಾಡಿ ಕರ್ತವ್ಯಕ್ಕೆ ಮರಳಿದ್ದೇನೆ.
ಅಣ್ಣ ಕೂಲಿ ಕೆಲಸಕ್ಕೆಂದು ಹೊರಗೆ ಹೋದಾಗ, ತಂದೆಯವರೊಬ್ಬರೇ ಮನೆಯಲ್ಲಿರುವಾಗ, ಯಾವುದೇ ಸೂಚನೆ, ನೋಟೀಸ್ ನೀಡದೇ ಚಿಪಗೇರಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಗದ್ದೆಯ ಬೇಲಿ ಖುಲ್ಲಾಪಡಿಸಿದ್ದಾರೆ. ನಾಟಿ ಮಾಡಿದ ಭತ್ತದ ಸಸಿಗಳನ್ನು ಕಿತ್ತು, ಸಮೀಪದಲ್ಲಿದ್ದ ಅಡಕೆ ಸಸಿಗಳನ್ನೂ ಕಡಿದು, ಆ ಜಾಗದಲ್ಲಿ ಅರಣ್ಯ ಜಾತಿಯ ಸಸಿಗಳನ್ನು ನೆಟ್ಟಿದ್ದಾರೆ. ಗದ್ದೆ ಸಮೀಪದಲ್ಲಿದ್ದ ಮನೆಯನ್ನು ಕೆಡವಿದ್ದಾರೆ. ಬೇಲಿಯ ತಂತಿ, ಕಂಬ ಹಾಗೂ ಮನೆಯ ಹಂಚುಗಳನ್ನೂ ತೆಗೆದುಕೊಂಡು ಹೋಗಿದ್ದಾರೆ.
ಇಡೀ ಕುಟುಂಬ ಮಾನಸಿಕವಾಗಿ ನೊಂದಿದೆ. ಅರಣ್ಯ ಅಧಿಕಾರಿಗಳ ಕಾನೂನು ಬಾಹಿರ ಕೃತ್ಯದಿಂದಾಗಿ ಮನಸ್ಸಿಗೆ ತೀರಾ ಆಘಾತವಾಗಿದೆ. ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ಮಾನಸಿಕವಾಗಿ ಅಡ್ಡಿಯಾಗುತ್ತಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ನಮಗೆ ಆದ ನಷ್ಟ ಭರಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.





