ಯಲ್ಲಾಪುರ: ಕಳೆದ ಏಪ್ರಿಲ್ ತಿಂಗಳಲ್ಲಿ ನಾಟಕ ನೋಡುವಾಗ ನಡೆದ ಹೊಡೆದಾಟದ ಬಗ್ಗೆ ಸೋಮವಾರ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಚಿಕೇರಿ ಸೋನಾರಜಡ್ಡಿಯ ವೆಂಕಟರಮಣ ಮಾದೇವ ಸಿದ್ದಿ ಕಳೆದ ಏಪ್ರಿಲ್ 24 ರಂದು ಗುಳ್ಳಾಪುರದ ವನದುರ್ಗಾ ದೇವಿ ಜಾತ್ರೆಯ ಪ್ರಯುಕ್ತ ನಡೆಯುತ್ತಿದ್ದ ನಾಟಕ ನೋಡುತ್ತಿದ್ದರು. ಆಗ ಗುಳ್ಳಾಪುರದ ರವಿ ಸಿದ್ದಿ ಹಾಗೂ ರಾಮಾ ಅಪ್ಪು ಸಿದ್ದಿ ಬಂದು ತಮ್ಮ ಮೊಬೈಲ್ ಕಾಣೆಯಾದ ವಿಷಯವನ್ನು ಪ್ರಸ್ತಾಪಿಸಿ ವೆಂಕಟರಮಣ ಮೇಲೆ ಏಕಾಏಕಿ ನಿಂದಿಸಿ, ಹಲ್ಲೆ ಮಾಡಲು ಆರಂಭಿಸಿದ್ದಾರೆ.
ಸುತ್ತಮುತ್ತ ಇದ್ದ ಜನರು ಸೇರಿ ಹೊಡೆದಾಟವನ್ನು ತಪ್ಪಿಸಿದ್ದಾರೆ. ಆಗ ಜೀವ ಬೆದರಿಕೆ ಹಾಕಿ ಇಬ್ಬರೂ ಓಡಿ ಹೋಗಿದ್ದಾರೆಂದು ಹಲ್ಲೆಗೊಳಗಾದ ವೆಂಕಟರಮಣ ಸಿದ್ದಿ ದೂರಿದ್ದಾರೆ.




