ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ‘ತಾಯಿ ಹೆಸರಿನಲ್ಲೊಂದು ಗಿಡ’ ಎಂಬ ವಿನೂತನ ಅಭಿಯಾನ ಮಂಗಳವಾರ ನಡೆಯಿತು.
ಕೇಂದ್ರ ಸರ್ಕಾರದ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ಈ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ ಆರ್. ಡಿ. ಜನಾರ್ದನ ಮಾತನಾಡಿ, ಮನುಷ್ಯ ಹೆಚ್ಚು ಬುದ್ದಿವಂತನಾದಷ್ಟು ವನ್ಯ ಜೀವಿಗಳನ್ನು ಹಾಗೂ ಮರಗಿಡಗಳ ಮೇಲೆ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಾನೆ. ಆದರೆ ಭೂಮಿಯಲ್ಲಿ ಎಲ್ಲ ಜೀವಿಗಳಿಗೂ ಬದುಕುವ ಹಕ್ಕು ಇದೆ ಎಂಬುದನ್ನು ಅರಿಯಬೇಕು ಎಂದರು.
ಡಿಸಿಎಫ್ ಹರ್ಷ ಭಾನು ಜಿ.ಪಿ ಮಾತನಾಡಿದರು. ಎಸಿಎಫ್ ಹಿಮವತಿ ಭಟ್ಟ, ಆರ್.ಎಫ್.ಒ ನರೇಶ್ ಜಿ.ವಿ, ಕ್ರಿಯೇಟಿವ್ ಕಂಪ್ಯೂಟರ್ ನ ಶ್ರೀನಿವಾಸ ಮುರ್ಡೇಶ್ವರ ಉಪಸ್ಥಿತರಿದ್ದರು. ಪತ್ರಾಂಕಿತ ವ್ಯವಸ್ಥಾಪಕ ಎನ್. ಬಿ ಮೆಣಸುಮನೆ ಸ್ವಾಗತಿಸಿದರು. ದ್ವಿತೀಯ ದರ್ಜೆ ಸಹಾಯಕ ಮಹಾದೇವಪ್ಪ ಹುಲಕೊಪ್ಪ ವಂದಿಸಿದರು.





