ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಾಗಿಲ್ಲ. ರಕ್ತದ ಅವಶ್ಯಕತೆ ಇರುವವರಿಗೆ ಇನ್ನೊಬ್ಬರ ರಕ್ತವನ್ನೇ ಪಡೆಯಬೇಕಾದದ್ದು ಅನಿವಾರ್ಯ.
ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡುವುದು ಪುಣ್ಯದ ಕಾರ್ಯ, ಜತೆಗೆ ಆರೋಗ್ಯ ವೃದ್ಧಿಗೂ ಸಹಾಯಕ. ಜೀವ ಉಳಿಸಿದ ಧನ್ಯತೆ ಒಂದೆಡೆಯಾದರೆ, ನಮ್ಮ ಆರೋಗ್ಯವನ್ನು ಕಾಯ್ದುಕೊಂಡ ನೆಮ್ಮದಿಯೂ ದೊರೆಯುತ್ತದೆ. ಅಂತಹ ಪುಣ್ಯ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡು, ರಕ್ತದಾನಿಗಳಿಗೆ ಪ್ರೇರಣೆಯಾಗಿರುವವರು ಯಲ್ಲಾಪುರದ ನಾಗರಾಜ ಕವಡಿಕೆರೆ.
ರಾಜಕೀಯ, ಸಾಮಾಜಿಕ, ಸಹಕಾರಿ ಹೀಗೆ ಹಲವು ನೆಲೆಯಲ್ಲಿ ಸಮಾಜಕ್ಕೆ ಪರಿಚಿತರಾಗಿರುವ ನಾಗರಾಜ ಅವರು, ರಕ್ತದಾನದಲ್ಲೂ ಆದರ್ಶರಾಗಿದ್ದಾರೆ. ಈವರೆಗೆ 66 ಬಾರಿ ರಕ್ತದಾನ ಮಾಡಿದ್ದಾರೆ.
ಅಪಘಾತ, ಅನಾರೋಗ್ಯ ಸೇರಿದಂತೆ ಹಲವು ಕಾರಣಗಳಿಗಾಗಿ ರಕ್ತದ ಅವಶ್ಯಕತೆ ಇದ್ದಾಗ ಸದಾ ಮುಂಚೂಣಿಯಲ್ಲಿದ್ದು, ರಕ್ತ ನೀಡಿ ನೆರವಾಗುವುದು ಇವರ ವಿಶೇಷತೆ. ಯಲ್ಲಾಪುರ ಮಾತ್ರವಲ್ಲದೇ ಶಿರಸಿ, ಹುಬ್ಬಳ್ಳಿ, ಧಾರವಾಡ, ಮಂಗಳೂರುಗಳಿಗೂ ಹೋಗಿ ಅಗತ್ಯವಿದ್ದವರಿಗೆ ರಕ್ತದಾನ ಮಾಡುತ್ತಾರೆ.
ಪಕ್ಷ, ಸಹಕಾರಿ ಸಂಘ, ಸಾರ್ವಜನಿಕ ಸೇವೆಯ ವಿವಿಧ ಜವಾಬ್ದಾರಿಗಳನ್ನು ಹೊಂದಿ, ಬಿಡುವಿಲ್ಲದ ಕಾರ್ಯದ ಒತ್ತಡದ ನಡುವೆಯೂ ರಕ್ತದಾನದ ಪವಿತ್ರ ಕಾರ್ಯವನ್ನು ನಿರಂತರವಾಗಿ ಮಾಡುತ್ತ ಮಾದರಿಯಾಗಿದ್ದಾರೆ.
ರಕ್ತದಾನ ಮಾಡುವವರ ತಂಡವೊಂದನ್ನು ರಚಿಸಿರುವ ನಾಗರಾಜ ಕವಡಿಕೆರೆ, ರಕ್ತದ ಅಗತ್ಯವಿರುವವರಿಗೆ ಸಮಯಕ್ಕೆ ಸರಿಯಾಗಿ ರಕ್ತ ನೀಡುವ ಕಾರ್ಯವನ್ನು ತಂಡದ ಮೂಲಕ ಮಾಡುತ್ತಿದ್ದಾರೆ. ನಾಗರಾಜ ಅವರ ಪ್ರೇರಣೆಯಿಂದ ಅನೇಕರು ರಕ್ತದಾನದಲ್ಲಿ ತೊಡಗಿಸಿಕೊಂಡಿರುವುದು ವಿಶೇಷ.





