ಉತ್ತಮ ಸಂಘಟನೆಯ ಮೂಲಕ ಜಿಲ್ಲೆಯ ಗಮನ ಸೆಳೆದಿರುವ ಯಲ್ಲಾಪುರದ ಶ್ರಾವಣ ಯಕ್ಷ ಸಂಭ್ರಮಕ್ಕೆ ಈ ಬಾರಿ ದಶಮಾನೋತ್ಸವದ ಸಂಭ್ರಮ. ಅಪರೂಪದ ಸಂಯೋಜನೆಯೊಂದಿಗೆ ದಶಮ ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮ ಬರುವ ಆಗಸ್ಟ್ 23 ರಂದು ಕಾರ್ಮಿಕ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಪೋಸ್ಟರನ್ನು ಯಲ್ಲಾಪುರದ ಗ್ರಾಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಿಡುಗಡೆಗೊಳಿಸಲಾಯಿತು.
ಸಂಕಲ್ಪದ ರೂವಾರಿ, ಸಾಂಸ್ಕೃತಿಕ ರಾಯಭಾರಿ ಪ್ರಮೋದ ಹೆಗಡೆ ಪೋಸ್ಟರ್ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಪ್ರಮೋದ ಹೆಗಡೆ, ಯುವಕರು ಯಕ್ಷಗಾನ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಶ್ರಾವಣ ಯಕ್ಷ ಸಂಭ್ರಮ ಕೇವಲ ಒಂದು ಕಾರ್ಯಕ್ರಮವಲ್ಲ, ಯಲ್ಲಾಪುರದ ಹಬ್ಬ. ಈ ಹಬ್ಬ ನಿರಂತರವಾಗಿ ಯಶಸ್ಸು ಗಳಿಸುತ್ತ ಮುನ್ನಡೆಯಲಿ ಎಂದು ಹಾರೈಸಿದರು.
ಸಂಘಟನೆಯ ರೂವಾರಿಗಳಾದ ಸುಬ್ಬಣ್ಣ ಕಂಚಗಲ್, ರಾಘವೇಂದ್ರ ಬೆಳಸೂರು ಮಾತನಾಡಿ, ಆಗಸ್ಟ್ 23 ರ ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ನಿರಂತರವಾಗಿ 12 ತಾಸುಗಳ ಕಾಲ ಯಕ್ಷಗಾನ ಪ್ರದರ್ಶನ ನಡೆಯಲಿದೆ. ದಶಮಾನೋತ್ಸವದ ಪ್ರಯುಕ್ತ ವಿಶೇಷ ಸಂಯೋಜನೆ ಮಾಡಲಾಗಿದ್ದು, ರತ್ನಾವತಿ ಕಲ್ಯಾಣ, ಊರ್ವಶಿ ಶಾಪ, ಮಾರುತಿ ಪ್ರತಾಪ, ಮಾರಣಾಧ್ವರ ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ದಕ್ಷಿಣೋತ್ತರಕನ್ನಡ ಜಿಲ್ಲೆಯ 40 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ತೆಂಕು-ಬಡಗು ಕಲಾವಿದರ ಕೂಡುವಿಕೆಯ ಒಂದು ಪ್ರಸಂಗ ಇರುವುದು ವಿಶೇಷ. ತೆಂಕು-ಬಡಗುಗಳೆರಡರಲ್ಲೂ ಭಾಗವತಿಕೆಯಲ್ಲಿ ಪರಿಣಿತರಾಗಿರುವ ದಿನೇಶ ಭಟ್ಟ ಯಲ್ಲಾಪುರ ಅವರನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು.
ಸಂಘಟನೆಯ ಸದಸ್ಯ ಎಂ.ಆರ್.ವಡ್ರಮನೆ ಮಾತನಾಡಿ, ಅಪರೂಪದ ಪ್ರಸಂಗಗಳು, ನುರಿತ ಕಲಾವಿದರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವಂತೆ ವಿನಂತಿಸಿದರು. ಸಂಘಟನೆಯ ಸದಸ್ಯರಾದ ನರಸಿಂಹ ಭಟ್ಟ, ಶ್ಯಾಮ ಆಚಾರಿ ಉಪಸ್ಥಿತರಿದ್ದರು.





