ಬುಡಕಟ್ಟು ಸಿದ್ದಿ ಸಮುದಾಯದವರಿಗೆ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆ ನೀಡಬೇಕೆಂಬ ಆಗ್ರಹವನ್ನು ಕರ್ನಾಟಕ ರಾಜ್ಯ ಬುಡಕಟ್ಟು ಜನಪರ ಸಂಘ ಮಾಡಿದೆ.
ಈ ಕುರಿತು ಸಂಘದ ಅಧ್ಯಕ್ಷ ಬೆನಿತ್ ಸಿದ್ದಿ ಅವರ ನೇತೃತ್ವದಲ್ಲಿ ಸಂಘದ ಸದಸ್ಯರು ಬೆಳಗಾವಿಯಲ್ಲಿ ಲೋಕೋಪಯೋಗಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಸಿದ್ದಿ ಸಮುದಾಯದ ಹಿರಿಯ ಮುಖಂಡ ಲಾರೆನ್ಸ್ ಖೈತಾನ್ ಸಿದ್ದಿ ಕಾಂಗ್ರೆಸ್ ಪಕ್ಷದಲ್ಲಿ ನಲವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಯಲ್ಲಾಪುರ ತಾಪಂ ಅಧ್ಯಕ್ಷರಾಗಿ, ಎಪಿಎಂಸಿ ಸದಸ್ಯರಾಗಿ ಸಮುದಾಯದ ಏಳಿಗೆಗೆ ದುಡಿದಿದ್ದಾರೆ. ಅವರಿಗೆ ಎಂ.ಎಲ್.ಸಿ ಅಥವಾ ನಿಗಮ ಮಂಡಳಿಯ ಉನ್ನತ ಹುದ್ದೆ ನೀಡಿ, ಅವರ ಮೂಲಕ ಸಮುದಾಯದ ಅಭಿವೃದ್ಧಿಗೆ ಸಹಕರಿಸಬೇಕೆಂದು ಒತ್ತಾಯಿಸಿದರು.
ಮನವಿಗೆ ಸ್ಪಂದಿಸಿದ ಜಾರಕಿಹೊಳಿ, ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಸಿದ್ದಿ ಬುಡಕಟ್ಟು ಸಮುದಾಯದ ಕುಂದು ಕೊರತೆ ಸಭೆ ಕರೆಯಲಾಗುವುದು. ಸಮುದಾಯದ ಮುಖಂಡರಿಗೆ ಹುದ್ದೆ ನೀಡುವ ಬಗ್ಗೆ ಪಕ್ಷದ ಹಿರಿಯರೊಂದಿಗೆ ಚರ್ಚಿಸಲಾಗುವುದೆಂದರು.





