ಯಲ್ಲಾಪುರ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯಕ್ಕೆ ಶೇ.100 ಅಂಕ ಪಡೆದ 36 ವಿದ್ಯಾರ್ಥಿಗಳನ್ನು ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಭಿನಂದಿಸಲಾಯಿತು.
ವಿದ್ಯಾರ್ಥಿಗಳನ್ನು ಅಭಿನಂದಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ ಚಂದ್ರಶೇಖರ ಹೊಸಮನಿ, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ವಿದ್ಯಾರ್ಥಿಗಳು ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡು, ಪರಿಶ್ರಮದೊಂದಿಗೆ ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದರು.
ಜಿಲ್ಲಾ ಕ.ಸಾ.ಪ ಅಧ್ಯಕ್ಷ ಬಿ.ಎನ್.ವಾಸರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿ ಜಿಲ್ಲೆಯಲ್ಲಿ 825 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಶೇ.100 ಅಂಕ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅವಕಾಶ ಸಿಕ್ಕರೆ ಪಿಯುಸಿಯಲ್ಲಿ ಕನ್ನಡದ ವಿಷಯದಲ್ಲಿ ಸಾಧನೆ ಮಾಡಿದವರನ್ನೂ ಅಭಿನಮನಂದಿಸುವ ಯೋಚನೆಯಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಯಾವುದೇ ಸಾಧನೆ ಮಾಡಲಿ, ಅವರ ಎದೆಯಲ್ಲಿ ಕನ್ನಡಕ್ಕೊಂದು ಜಾಗ ಸದಾ ಇರಲಿ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದೇವೆ. ಇಂಗ್ಲಿಷ್ ಮತ್ತು ವಿದೇಶದ ಮೇಲಿನ ಅನಗತ್ಯ ವ್ಯಾಮೋಹ ತೊರೆದು ಸಾಧನೆಯಲ್ಲಿ ತೊಡಗಿದರೆ ಬದುಕು ಬಂಗಾರವಾಗುತ್ತದೆ ಎಂದರು.
ಬಿಇಒ ಎನ್.ಆರ್.ಹೆಗಡೆ, ಪತ್ರಕರ್ತ ಶಂಕರ ಭಟ್ಟ ತಾರೀಮಕ್ಕಿ, ತಾಲೂಕು ಕ.ಸಾ.ಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಮಾತನಾಡಿದರು. ಗೌರವ ಕಾರ್ಯದರ್ಶಿ ಜಿ.ಎನ್.ಭಟ್ಟ ತಟ್ಟಿಗದ್ದೆ, ಕೋಶಾಧ್ಯಕ್ಷ ಡಿ.ಎನ್.ಗಾಂವ್ಕರ ಇತರರಿದ್ದರು. ಪತ್ರಕರ್ತ ಕೇಬಲ್ ನಾಗೇಶ ನಿರ್ವಹಿಸಿದರು.





