ಯಲ್ಲಾಪುರ: ಸಾಕಷ್ಟು ವಿರೋಧದ ನಡುವೆಯೂ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರ ವರ್ಗಾವಣೆಯಾಗಿದೆ. ಅವಕಾಶ ಇದ್ದರೂ ಸ್ಥಳೀಯ ಶಾಸಕರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಜನರ ಸಮಸ್ಯೆಗಳನ್ನು ಬಗೆಹರಿಸದೇ ಇದ್ದರೆ ಜನಪ್ರತಿನಿಧಿಗಳು ಏಕೆ ಬೇಕು ಎಂದು ಪ್ರಶ್ನಿಸಿದರು. ತಕ್ಷಣ ಬೇರೆ ವೈದ್ಯರ ನೇಮಕ ಆಗಬೇಕು, ಇಲ್ಲವಾದರೆ ಮೊದಲಿದ್ದ ವೈದ್ಯರನ್ನು ಪುನಃ ಇದೇ ಆಸ್ಪತ್ರೆಗೆ ನೇಮಿಸಬೇಕು ಎಂದು ಒತ್ತಾಯಿಸಿದರು.
ಆರ್.ಸಿ.ಬಿ ವಿಜಯೋತ್ಸವದ ಕಾಲ್ತುಳಿತ ಪ್ರಕರಣಕ್ಕೆ ಸರ್ಕಾರವೇ ಸಂಪೂರ್ಣ ಹೊಣೆ. ಕಾಲ್ತುಳಿದಲ್ಲಿ ಸಿಲುಕಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಜನರೆಲ್ಲ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿರುವ ಸಂದರ್ಭದಲ್ಲಿ ಸರ್ಕಾರ ಸಾಧನಾ ಸಮಾವೇಶ ಮಾಡುತ್ತಿದೆ. ಇದು ಸಾಧನಾ ಸಮಾವೇಶವಲ್ಲ, ನಾಡಿನ ಜನರ ವೇದನಾ ಸಮಾವೇಶ ಎಂದು ಟೀಕಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ದೀಪಕ ಭಟ್ಟ ವರ್ಗಾವಣೆ ವಿರೋಧಿಸಿ ಪಕ್ಷದಿಂದ ಪ್ರತಿಭಟನೆ ನಡೆಸಿದ್ದೆವು. ಆದರೆ ದುರಾದೃಷ್ಟವಶಾತ್ ವರ್ಗಾವಣೆ ಆಗಿದೆ. ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಅನುಭವಿಯಾಗಿರುವ ಸ್ಥಳೀಯ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ತಹಸೀಲ್ದಾರರ ವರ್ಗಾವಣೆಯಾಗಿದೆ, ಪಟ್ಟಣ ಪಂಚಾಯಿತಿಗೆ ಕಾಯಂ ಮುಖ್ಯಾಧಿಕಾರಿ ಇಲ್ಲ. ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸರಿ ಇಲ್ಲ ಎಂದು ದೂರಿದರು.
ಗ್ರಾ.ಪಂ ಜನಪ್ರತಿನಿಧಿಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಗಣೇಶ ಹೆಗಡೆ ಮಾತನಾಡಿ, ಗ್ರಾ.ಪಂ ಅವಧಿ ಮುಗಿಯುತ್ತ ಬಂದಿದೆ. ಮೂರು ವರ್ಷಗಳಿಂದ ಕಟ್ಟಿದ ಮನೆಗಳಿಗೆ ಬಿಲ್ ಆಗಿಲ್ಲ. ಹೊಸದಾಗಿ ಮನೆ ಮಂಜೂರಾಗುತ್ತಿಲ್ಲ. ಕ್ಷೇತ್ರದಲ್ಲಿ ಗ್ರಾ.ಪಂ ಸದಸ್ಯರು ತಲೆ ಎತ್ತಿ ತಿರುಗಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಮುಖರಾದ ಉಮೇಶ ಭಾಗ್ವತ, ಗೋಪಾಲಕೃಷ್ಣ ಗಾಂವ್ಕರ, ಜಿ.ಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ಪ್ರಧಾನ ಕಾರ್ಯದರ್ಶಿ ಪ್ರಮೋದ, ಮಾಧ್ಯಮ ಸಂಚಾಲಕ ಕೆ.ಟಿ.ಹೆಗಡೆ ಇತರರಿದ್ದರು.





