ಯಲ್ಲಾಪುರ-ಮುಂಡಗೋಡ ರಸ್ತೆ ಲೋಕೋಪಯೋಗಿ ಇಲಾಖೆಯಿಂದ ನಿರ್ವಹಣೆ ಇಲ್ಲದೇ ಸಂಪೂರ್ಣ ಹದಗೆಟ್ಟಿದೆ. ರಸ್ತೆಯಲ್ಲಿ ಹೊಂಡಗುಂಡಿಗಳು ತುಂಬಿ ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ ಎಂದು ಮದನೂರು ಗ್ರಾ.ಪಂ ಸದಸ್ಯ ಪ್ರಕಾಶ ಶಾಪುರಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನನಿತ್ಯ ಶಾಲಾ ಮಕ್ಕಳ ವಾಹನ, ಬಸ್ ಹಾಗೂ ಇತರ ವಾಹನಗಳು ಸಂಚರಿಸುವ ಪ್ರಮುಖ ರಸ್ತೆ ಇದಾಗಿದೆ. ಲೋಕೋಪಯೋಗಿ ಇಲಾಖೆಯ ನಿಷ್ಕಾಳಜಿ ಹಾಗೂ ನಿರ್ಲಕ್ಷತನದಿಂದ ಈ ರಸ್ತೆ ಸಂಪೂರ್ಣ ಹಾಳಾಗಿದೆ.
ಅದೆಷ್ಟೋ ಬಾರಿ ಸಾರ್ವಜನಿಕರು, ಸ್ಥಳೀಯ ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಬೇಡಿಕೆಯನ್ನು ಇಲಾಖೆಯಲ್ಲಿ ಇಟ್ಟರೂ, ಅಧಿಕಾರಿಗಳು ಮಾತ್ರ ಯಾವದಕ್ಕೂ ತಲೆಕೆಡಿಸಿಕೊಂಡಿಲ್ಲ. ಕೆಲವು ದಿನಗಳ ಹಿಂದೆ ಆದ ಮದನೂರು ಗ್ರಾಮ ಸಭೆಗೆ ಇಲಾಖೆಯವರು ಬಾರದೇ ಇರುವ ಕಾರಣ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸಭೆಯನ್ನೇ ಬಹಿಷ್ಕರಿಸಿದ್ದರು.
ಕಳೆದೆ ಬಾರಿ ರಸ್ತೆ ನಿರ್ವಹಣೆ ಗುತ್ತಿಗೆ ಪಡೆದ ಗುತ್ತಿಗೆದಾರರು ಕಳಪೆ ಕೆಲಸವನ್ನು ಮಾಡಿದ್ದರೂ, ಇಲಾಖೆ ಕಾಮಗಾರಿಯನ್ನು ಪರಿಶೀಲಿಸದೆ ಬಿಲ್ ಮಾಡಿಸಿಕೊಟ್ಟಿದೆ.
ಇನ್ನು ಒಂದು ವಾರದಲ್ಲಿ ರಸ್ತೆಯ ಗುಂಡಿಗಳನ್ನು ಮುಚ್ಚಿ, ರಸ್ತೆ ಸರಿಪಡಿಸದಿದ್ದರೆ ಯಲ್ಲಾಪುರ-ಮುಂಡಗೋಡ್ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು. ಲೋಕೋಪಯೋಗಿ ಇಲಾಖೆಯ ಕಚೇರಿಗೂ ಮುತ್ತಿಗೆ ಹಾಕಲಾಗುವುದು ಎಂದು ಮದನೂರು ಗ್ರಾಪಂ ಸದಸ್ಯ ಪ್ರಕಾಶ ಅರ್ಜುನ ಶಾಪುರಕರ ಎಚ್ಚರಿಸಿದ್ದಾರೆ.





