ಯಲ್ಲಾಪುರ ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನದ ಸಲುವಾಗಿ ಸಮಿತಿಯ ಸದಸ್ಯರಿಗೆ ಆಯಾ ಗ್ರಾ.ಪಂ ಮಟ್ಟದ ಮೇಲುಸ್ತುವಾರಿಯನ್ನು ನೀಡಲಾಗಿದೆ ಎಂದು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಉಲ್ಲಾಸ ಶಾನಭಾಗ ಹೇಳಿದರು.
ಅವರು ಬುಧವಾರ ಪಟ್ಟಣದ ಸಾಮರ್ಥ್ಯಸೌಧದಲ್ಲಿ ಹಮ್ಮಿಕೊಂಡಿದ್ದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಸ್ಕಾಂ ಎಇಇ ರಮಾಕಾಂತ ನಾಯ್ಕ ಮಾಹಿತಿ ನೀಡಿ, ಗೃಹಜ್ಯೋತಿ ಯೋಜನೆ ತಾಲೂಕಿನಲ್ಲಿ ನೂರಕ್ಕೆ ನೂರು ಜನರಿಗೆ ತಲುಪಿದೆ ಎಂದರು.
ಸಾರಿಗೆ ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೆಕರ್ ಮಾತನಾಡಿ, ತಾಲೂಕಿನಲ್ಲಿ ಪ್ರಯಾಣಿಕರ ಬೇಡಿಕೆಯ ಅನುಸಾರ ಕಳೆದ ನಾಲ್ಕು ವರ್ಷದಿಂದ ಬಂದ್ ಆಗಿದ್ದ ಕೆಳಾಸೆ ರೂಟ್ ಪ್ರಾರಂಭಿಸಲಾಗಿದೆ. ಕರಡೋಳ್ಳಿ, ತೆಂಗಿನಗೇರಿ, ಭಾಗಕ್ಕೆ ಬಸ್ ಓಡಾಟ ಹೊಸದಾಗಿ ಪ್ರಾರಂಭಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಹೊನಗದ್ದೆ-ಬಾಸಲ್ ಹೊಸ ಮಾರ್ಗ ಆರಂಭಿಸಲಾಗುತ್ತದೆ. ಹೊಸಳ್ಳಿ, ಕಿರವತ್ತಿಯಿಂದ ಯಲ್ಲಾಪುರ ಹೊಸ ಮಾರ್ಗ ಆರಂಭಿಸಲು ಯೋಜಿಸಲಾಗಿದೆ’ ಎಂದರು.
ಸಮಿತಿ ಸದಸ್ಯರಾದ ಟಿ ಸಿ ಗಾಂವ್ಕಾರ, ಮಹೇಶ ನಾಯ್ಕ, ಮುಶರತ್ ಶೇಖ್, ಶಿವಾನಂದ ನಾಯ್ಕ, ಬಾಬಾಜಾನ್
ಕಿರವತ್ತಿ, ಬಸ್ತ್ಯಾಂವ್ ಬಾಳಗುಂದ್ಲಿಕರ್, ಮಾವಿನಮನೆ ಗ್ರಾಪಂ ಸದಸ್ಯ ಮಾಚಣ್ಣ ಹಲ್ಗುಮನೆ ಇತರರು ಭಾಗವಹಿಸಿದ್ದರು.