ಯಲ್ಲಾಪುರದ ತರಕಾರಿ ಮಾರುಕಟ್ಟೆಯ ಪ್ರಾಂಗಣದಲ್ಲಿ ಹೊಸದಾಗಿ 11 ಮಳಿಗೆಗಳನ್ನು ನಿರ್ಮಿಸಿ ವರ್ಷವೇ ಕಳೆದರೂ, ಇನ್ನೂ ಉದ್ಘಾಟನೆಯ ಭಾಗ್ಯ ಕೂಡಿ ಬಂದಿಲ್ಲ. ಕಾರಣ ಶಾಸಕರ ಮುಹೂರ್ತ ಸಿಕ್ಕಿಲ್ಲ. ಇದು ಅಧಿಕಾರಿಗಳೇ ಹೇಳುವ ಮಾತು.
ತರಕಾರಿ ಮಾರುಕಟ್ಟೆಯಲ್ಲಿ 15 ಗುಂಟೆ ಜಾಗವನ್ನು ಎಪಿಎಂಸಿಯವರು ಪಟ್ಟಣ ಪಂಚಾಯಿತಿಯಿಂದ ಲೀಸ್ ಗೆ ಪಡೆದು ಅಂಗಡಿ ಕಟ್ಟೆಗಳನ್ನು ನಿರ್ಮಿಸಿದ್ದರು. ಇದರಲ್ಲಿ ಬಂದ ಉತ್ಪನ್ನದಲ್ಲಿ ಶೇ.40 ರಷ್ಟು ಪಾಲು ಪಪಂ ಗೆ ಹಾಗೂ ಶೇ.60 ರಷ್ಟು ಪಾಲು ಎಪಿಎಂಸಿಯವರಿಗೆ ಎಂಬ ಕರಾರು ಮಾಡಿಕೊಳ್ಳಲಾಗಿತ್ತು.
ಈ ಹಿಂದೆ ಮಾರುಕಟ್ಟೆಯಲ್ಲಿದ್ದ ಅಂಗಡಿ ಕಟ್ಟೆಗಳು ವ್ಯಾಪಾರಸ್ಥರಿಗೆ ಅನುಕೂಲವಾಗಿಲ್ಲ ಎಂಬ ಆಕ್ಷೇಪವಿತ್ತು. ಅದರ ನಡುವೆಯೇ ಹತ್ತು ವರ್ಷಗಳ ಕಾಲ ಕಳೆದು ಹೋಯಿತು. ಅಲ್ಲಿ ಮೂಲಭೂತ ಸೌಲಭ್ಯ ಸರಿಯಾಗಿ ಇಲ್ಲ ಎಂದು ತರಕಾರಿ ಮಾರುಕಟ್ಟೆಯ ವ್ಯಾಪಾರಸ್ಥರು ತಕರಾರು ತೆಗೆಯುತ್ತಲೇ ಬಂದಿದ್ದರು. ಈ ಅವ್ಯವಸ್ಥೆಯ ಕಾರಣಕ್ಕೆ ಮಾರುಕಟ್ಟೆಯಲ್ಲಿ ಅಂಗಡಿ ಇದ್ದರೂ, ವ್ಯಾಪಾರಸ್ಥರು ಪಟ್ಟಣದ ಬೇರೆ ಬೇರೆ ಕಡೆ ರಸ್ತೆಗಳ ಪಕ್ಕ ತರಕಾರಿ ಮಾರಾಟಕ್ಕೆ ಮುಂದಾಗಿದ್ದರು.
ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಳೆದ ವರ್ಷ ಎಪಿಎಂಸಿಯವರು ಅಂಗಡಿ ಕಟ್ಟೆಯ ಸ್ವರೂಪವನ್ನೇ ಬದಲಿಸಿ ನೂತನವಾಗಿ ಹನ್ನೊಂದು ಮಳಿಗೆಗಳನ್ನು ಒಟ್ಟು 10.64 ಲಕ್ಷ ರೂ ನಲ್ಲಿ ನಿರ್ಮಿಸಿದ್ದಾರೆ. ನಿರ್ಮಿಸಿ ವರ್ಷವಾದರೂ ಬಳಕೆಗೆ ತೆರೆದುಕೊಂಡಿಲ್ಲ.
ಅಂಗಡಿಗಳು ಸಿದ್ಧವಾಗಿ ವರ್ಷ ಕಳೆದಿದೆ. 2-3 ಬಾರಿ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗಿತ್ತಾದರೂ ವಿವಿಧ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ ಶಾಸಕರ ಸಮಯಕ್ಕಾಗಿ ಕಾಯಲಾಗುತ್ತಿದೆಯೆಂಬ ಸಬೂಬು. ಕಟ್ಟಿಡ ಅಂಗಡಿಗಳು ಹಾಳಾಗುವ ಮುನ್ನ ಉದ್ಘಾಟನೆಯಾಗಲಿ, ಉದ್ಘಾಟನೆಗೆ ಶಾಸಕರ ಸಮಯ ಶೀಘ್ರದಲ್ಲೇ ಸಿಗಲಿ, ತರಕಾರಿ ಮಾರುಕಟ್ಟೆಯ ಅವ್ಯವಸ್ಥೆ ಸರಿಯಾಗಲಿ ಎಂಬ ಆಶಯ ತಾಲೂಕಿನ ಜನರದ್ದಾಗಿದೆ.