ಯಲ್ಲಾಪುರ ತಾಲೂಕಿನ ಮಂಚಿಕೇರಿ ಸುತ್ತಮುತ್ತ ತೋಟಗಳಲ್ಲಿ ಆನೆಯೊಂದು ಓಡಾಟ, ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.
ಎರಡು ದಿನಗಳ ಹಿಂದೆ ಮಂಚಿಕೇರಿ ಸಮೀಪದ ಕೊಕ್ಕಾರ ಭಾಗದಲ್ಲಿ ಆನೆ ಓಡಾಡಿದೆ. ಕೊಕ್ಕಾರ ಹಾಗೂ ಸುತ್ತಲಿನ ಕೆಲ ಅಡಕೆ ತೋಟಗಳಲ್ಲಿ ಆನೆ ನಡೆದು ಹೋಗಿದೆ. ಆದರೆ ಅಡಕೆ ಗಿಡ, ಮರಗಳಿಗೆ ಯಾವುದೇ ಹಾನಿ ಮಾಡಿಲ್ಲ. ಮಾರನೇ ದಿನ ಬೆಳಗ್ಗೆ ಆನೆಯ ಹೆಜ್ಜೆ ಗುರುತು ಕಂಡ ನಂತರವೇ ಆನೆಯ ಓಡಾಟದ ವಿಷಯ ಸ್ಥಳೀಯರಿಗೆ ಗೊತ್ತಾಗಿದೆ.
ಒಂದೇ ಆನೆ ಬಂದಿದ್ದು, ಗುಂಪಿನಿಂದ ತಪ್ಪಿಸಿಕೊಂಡು ದಾರಿ ತಪ್ಪಿ ಈ ಭಾಗಕ್ಕೆ ಬಂದಿರಬಹುದು. ಚಿಪಗೇರಿ ಕಡೆಯಿಂದ ಬಂದ ಆನೆ ಆ ಕಡೆಗೇ ಮರಳಿ ಹೋಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಮಂಚಿಕೇರಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ತಿಳಿಸಿದ್ದಾರೆ.