ಸರಿಯಾಗಿ ಪಾಠ ಕಲಿಯಲಿಲ್ಲವೆಂದು ಮುಂಡಗೋಡಿನಲ್ಲಿ ವಿದ್ಯಾರ್ಥಿಗೆ ಶಿಕ್ಷಕಿ ಥಳಿಸಿರುವ ಘಟನೆ ನಿನ್ನೆಯಷ್ಟೇ ನಡೆದಿದೆ. ಅಲ್ಲಲ್ಲಿ ಇಂತಹ ಘಟನೆಗಳು ನಡೆಯುವ ಬಗ್ಗೆ ಆಗಾಗ ಕೇಳುತ್ತಲೇ ಇರುತ್ತೇವೆ.
ಕ್ರಿಯಾಶೀಲತೆ, ಹೊಸ ಚಿಂತನೆಗಳಿಂದ ಪಾಠ ಮಾಡಿದರೆ, ಮಕ್ಕಳು ಆಸಕ್ತಿಯಿಂದ ಕಲಿಯುವ ಹಾಗೆ ಮಾಡಬಹುದು. ಯಾವ ಶಿಕ್ಷೆಯಿಲ್ಲದೇ ಮಾದರಿಯ ಶಿಕ್ಷಣ ನೀಡಬಹುದೆಂಬುದಕ್ಕೆ ಯಲ್ಲಾಪುರ ತಾಲೂಕಿನ ಸವಣಗೇರಿ ಶಾಲೆಯ ಶಿಕ್ಷಕರು ಉದಾಹರಣೆಯಾಗಿದ್ದಾರೆ.
ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿ, ಪಠ್ಯ ವಿಷಯವನ್ನು ಮಕ್ಕಳಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 7ನೇ ತರಗತಿಯ ಕನ್ನಡ ವಿಷಯದ “ಭಾಗ್ಯದ ಬಳೆಗಾರ” ಎಂಬ ಪದ್ಯವನ್ನು ಹಾಡು, ನೃತ್ಯ ರೂಪಕದ ಮೂಲಕ ಪಾಠ ಮಾಡಿದರು.
ಈ ಪದ್ಯ ತಾಯಿಯ ಮನೆಯ ದಾರಿ, ಹಳ್ಳಿಯ ಪರಿಸರದ ಬಗ್ಗೆ ಹಳ್ಳಿಯ ಭಾಷೆಯಲ್ಲಿ ಸೊಗಸಾಗಿ ಸಾರುತ್ತದೆ. ಮಕ್ಕಳಿಗೆ ವಿವಿಧ ವೇಷಗಳನ್ನು ತೊಡಿಸಿ, ಅವರಿಂದ ಹಾಡು, ನೃತ್ಯ ಮಾಡಿಸಲಾಯಿತು. ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಜಾನಪದ ಸಾಹಿತ್ಯ, ಸಂಗೀತ ಬಗ್ಗೆಯೂ ಅರಿವು ಮೂಡಿಸಲಾಯಿತು. ಕಡಿಮೆ ಸಮಯದಲ್ಲಿ ಪದ್ಯದ ಅರ್ಥವನ್ನು ತಿಳಿದು, ನೃತ್ಯದ ಮೂಲಕ ಅದನ್ನು ವ್ಯಕ್ತಪಡಿಸುವಲ್ಲಿ ಈ ಚಟುವಟಿಕೆ ಯಶಸ್ವಿಯಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ಸಂಜೀವಕುಮಾರ ಹೊಸ್ಕೇರಿ, ಶಿಕ್ಷಕರಾದ ಗೀತಾ, ಪೂರ್ಣಿಮಾ, ಪವಿತ್ರಾ ಆಚಾರಿ, ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ವೈಷ್ಣವಿ ಗೌಡ, ಅಫ್ರೀನ್.ಕೆ ಈ ಕ್ರಿಯಾಶೀಲ ಚಟುವಟಿಕೆಯ ನೇತೃತ್ವ ವಹಿಸಿದ್ದರು. ಮಕ್ಕಳು ಆಸಕ್ತಿಯಿಂದ ಚಟುವಟಿಕೆಯಲ್ಲಿ ಭಾಗವಹಿಸಿದ್ದರು.