ಯಲ್ಲಾಪುರ ತಾಲೂಕಿನ ಆನಗೋಡಿನ ಬೆಲ್ತರಗದ್ದೆಯಲ್ಲಿ ಸಿದ್ದಿ ಸಮುದಾಯದ ಮಹಿಳೆ ಹಸಿವಿನಿಂದ ಬಳಲಿ, ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವುದು ರಾಜ್ಯ ಸರ್ಕಾರ ತಲೆತಗ್ಗಿಸುವ ಘಟನೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳೆ ಹಸಿವಿನಿಂದ ಸತ್ತಿದ್ದಾರೆಂದು ಕುಟುಂಬದವರು ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಹಸಿವು ಮುಕ್ತ ರಾಜ್ಯವನ್ನಾಗಿಸಿದ್ದೇವೆ ಎನ್ನುವ ರಾಜ್ಯ ಸರ್ಕಾರಕ್ಕೆ ಈ ಕುಟುಂಬದ ಸ್ಥಿತಿ ಅರಿವಿಗೆ ಬರಲಿಲ್ಲವೇ ಎಂದು ಪ್ರಶ್ನಿಸಿದರು.
ಮೃತ ಮಹಿಳೆ ಒಂಟಿಯಾಗಿ ವಾಸಿಸುತ್ತಿದ್ದು, ಅವರಲ್ಲಿ ಇನ್ನೂ ಆಧಾರ್ ಕಾರ್ಡ್, ಪಡಿತರ ಚೀಟಿಗಳು ಇತ್ಯಾದಿ ದಾಖಲೆಗಳು ಇರಲಿಲ್ಲ. ಸರ್ಕಾರದ ಯಾವ ಸೌಲಭ್ಯಗಳೂ ಅವರಿಗೆ ಸಿಗುತ್ತಿರಲಿಲ್ಲ ಎಂಬ ವಿಚಾರ ಅವರ ಮನೆಗೆ ಭೇಟಿ ನೀಡಿದಾಗ ತಿಳಿದಿದೆ. ಸರ್ಕಾರ ನಿಜವಾಗಿ ಬಡವರ ಪರವಾಗಿ ಇದ್ದರೆ ಬುಡಕಟ್ಟು ಸಮುದಾಯದ ಮಹಿಳೆಗೆ ಇಂತಹ ದುಃಸ್ಥಿತಿ ಬರುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳನ್ನು ಎಲ್ಲರಿಗೂ ತಲುಪಿಸುತ್ತಿದ್ದೇವೆ ಎಂದು ಸರ್ಕಾರ ಪ್ರಚಾರ ಮಾಡಿಕೊಳ್ಳುತ್ತಿದೆ. ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲೆ, ತಾಲೂಕು ಮಟ್ಟದಲ್ಲಿ ನೇಮಿಸಿದ ಸಮಿತಿಗಳು ಏನು ಮಾಡುತ್ತಿವೆ ಎಂದು ಪ್ರಶ್ನಿಸಿದರು.
ಎಸ್.ಸಿ., ಎಸ್.ಟಿ ಸಮುದಾಯಕ್ಕಾಗಿ ನೀಡುವ ಅನುದಾನಗಳನ್ನು ಬೇರೆಡೆ ವರ್ಗಾಯಿಸುವ ಕಾರ್ಯ ಮಾಡಲಾಗುತ್ತಿದೆ. ಅದನ್ನು ಸರಿಯಾಗಿ ಸಮುದಾಯಕ್ಕೇ ನೀಡಿದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದ ಅವರು, ಘಟನೆಯ ಬಗ್ಗೆ ಸಮರ್ಪಕ ತನಿಖೆ ಆಗಬೇಕು. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತು ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡಬೇಕು. ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಮೃತ ಮಹಿಳೆಗೆ ಮಾತ್ರವಲ್ಲ, ಅವರ ಮಕ್ಕಳು, ಮೊಮ್ಮಕ್ಕಳ ಬಳಿಯೂ ಯಾವುದೇ ದಾಖಲೆಗಳಿಲ್ಲ. ಅವರಿಗೆ ದಾಖಲೆಗಳು, ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರದ ಈ ವೈಫಲ್ಯದ ಬಗ್ಗೆ ಸದನದಲ್ಲಿ ಗಮನ ಸೆಳೆಯಲಾಗುವುದು. ಸರ್ಕಾರ ಸ್ಪಂದಿಸದೇ ಇದ್ದರೆ ಹೋರಾಟದ ಹಾದಿ ಅನಿವಾರ್ಯ ಎಂದರು.
ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ರಾಜ್ಯ ಸರ್ಕಾರ ಮೊದಲ ದಿನದಿಂದಲೂ ಬೇಜವಾಬ್ದಾರಿ ಪ್ರದರ್ಶಿಸುತ್ತಿದೆ. ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಅಬ್ಬರದ ಪ್ರಚಾರ ಮಾಡುವ ಸರ್ಕಾರ ಯಾವ ರೀತಿ ಹಸಿವುಮುಕ್ತ ರಾಜ್ಯ ಮಾಡಿದೆ ಎಂಬುದು ಇಂತಹ ಸಾವಿನಿಂದ ಸಾಬೀತಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಪ್ರಧಾನ ಕಾರ್ಯದರ್ಶಿ ರವಿ ಕೈಟ್ಕರ್, ಪ್ರಮುಖರಾದ ಕೆ.ಟಿ.ಹೆಗಡೆ, ರವಿ ದೇವಡಿಗ, ಸೋಮು ನಾಯ್ಕ ಇದ್ದರು.