ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮತಕಳ್ಳತನವಾದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪ ಮಾಡಿ, ತನಿಖೆಗೆ ಆಗ್ರಹಿಸಿದ್ದಾರೆ. ಅದೇ ರೀತಿ 2023 ರ ವಿಧಾನ ಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಕ್ರಮ ಎಸಗಿರುವ ಸಂಭವವಿದ್ದು, ಅವರ ವಿರುದ್ಧವೂ ತನಿಖೆಯಾಗಬೇಕು ಎಂದು ಬಿಜೆಪಿ ಮುಖಂಡ, ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಆಗ್ರಹಿಸಿದರು.
2019 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಸ್ಥಾನಗಳಲ್ಲಿ ಒಂದನ್ನು ಮಾತ್ರ ಗೆಲ್ಲಲು ಶಕ್ಯವಾಗಿದ್ದ ಕಾಂಗ್ರೆಸ್, 2024 ರ ಚುನಾವಣೆಯಲ್ಲಿ 9 ಸ್ಥಾನ ಗೆದ್ದಿದ್ದು ನಮ್ಮ ಸಂಶಯಕ್ಕೂ ಕಾರಣವಾಗಿತ್ತು. ಈಗ ಸ್ವತಃ ಕಾಂಗ್ರೆಸ್ ಪ್ರಮುಖರೇ, 2024 ರ ಲೋಕಸಭೆ ಚುನಾವಣೆಯಲ್ಲಿ, ಕರ್ನಾಟಕದಲ್ಲಿ ಅಕ್ರಮ ಮತದಾನ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದು, ತನಿಖೆಗೂ ಆಗ್ರಹಿಸಿದ್ದಾರೆ. ನಮ್ಮ ಸಂಶಯವನ್ನು ಪುಷ್ಠೀಕರಿಸಿದ ರಾಹುಲ್ ಹಾಗೂ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
2024 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿ ಇತ್ತು. ಆದರೂ ಆ ಪಕ್ಷದ ಮುಖಂಡರೇ ಅಕ್ರಮ ಮತದಾನದ ಆರೋಪ ಮಾಡಿರುವುದರಿಂದ ಈ ಪ್ರಕರಣ ತನಿಖೆಗೆ ಯೋಗ್ಯವಾಗಿದೆ.
ಕಾಂಗ್ರೆಸ್ ಗೆದ್ದ 9 ಲೋಕಸಭಾ ಕ್ಷೇತ್ರಗಳ ಜೊತೆಗೆ, 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ 137 ಕ್ಷೇತ್ರಗಳಲ್ಲೂ ಅಕ್ರಮ ನಡೆದಿರುವ ಸಂಭವ ಇದ್ದು, ಅಲ್ಲಿಯೂ ತನಿಖೆ ಕೈಗೊಳ್ಳಬೇಕಾಗಿ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದರು.