ಇತ್ತೀಚೆಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ ಕಾಮಿಡಿ ಕಿಲಾಡಿ ಖ್ಯಾತಿಯ ಚಂದ್ರಶೇಖರ ಸಿದ್ದಿ ಅವರಿಗೆ ಕುಟುಂಬದವರೇ ಥಳಿಸಿದ ವಿಡಿಯೊ ಹೊರಬಿದ್ದಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಂದ್ರಶೇಖರ್ ಸತ್ತು 10 ದಿನಗಳು ಕಳೆದ ನಂತರ, ಮೂರು ತಿಂಗಳಿನಷ್ಟು ಹಳೆಯದ್ದು ಎನ್ನಲಾದ ಈ ವಿಡಿಯೊ ಹರಿಯ ಬಿಡಲಾಗಿದೆ. ವಿಡಿಯೊ ಹಳೆಯದೇ ಆದರೂ ಸಾವಿನ ಹಿಂದೆ ಇಂತಹ ಘಟನೆಗಳು ಪರಿಣಾಮ ಬೀರಿರಬಹುದೇ ಎಂಬ ಅನುಮಾನ ಮೂಡಿಸುತ್ತಿದೆ.
ವಿಡಿಯೋದಲ್ಲಿ ಪತ್ನಿ ವನಜಾಕ್ಷಿ ಸಿದ್ದಿ ಅವರು ಬಡಿಗೆ ಹಿಡಿದು ಚಂದ್ರಶೇಖರ ಅವರನ್ನು ಥಳಿಸಿದ್ದಾರೆ. ಅಲ್ಲಿದ್ದ ಮತ್ತಿಬ್ಬರು ಸಹ ಚಂದ್ರಶೇಖರ ಸಿದ್ದಿ ಅವರಿಗೆ ಹೊಡೆದಿದ್ದು, ಇನ್ನೊಬ್ಬ ವ್ಯಕ್ತಿ `ಹೊಡೆಯಬೇಡಿ’ ಎನ್ನುತ್ತಿರುವ ಮಾತುಗಳು ಸೆರೆಯಾಗಿದೆ. ಸೋಫಾ ಮೇಲೆ ಚಂದ್ರಶೇಖರ ಸಿದ್ದಿ ಅವರು ಕುಳಿತಿದ್ದಾಗ ಎಲ್ಲರೂ ಸೇರಿ ಒಮ್ಮೆಲೆ ಮುಗಿ ಬಿದ್ದಿದ್ದಾರೆ.
ತೇಲಂಗಾರಿನವರಾದ ಚಂದ್ರಶೇಖರ ಸಿದ್ದಿ ಅವರು ಕಾಮಿಡಿ ಕಿಲಾಡಿ ಶೋದಲ್ಲಿ ಭಾಗವಹಿಸಿ ಪ್ರಸಿದ್ಧಿ ಪಡೆದಿದ್ದರು. ನಂತರ ಧಾರಾವಾಹಿಯಲ್ಲೂ ನಟಿಸಿದ್ದರು. ಕೆಲ ತಿಂಗಳುಗಳಿಂದ ಕಟ್ಟಿಗೆ ಗ್ರಾಮದ ಕೋಟೆಮನೆಯ ರೈತರೊಬ್ಬರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರ ಜೊತೆ ಅವರ ಪತ್ನಿ ವನಜಾಕ್ಷಿ ಸಿದ್ದಿ ಹಾಗೂ ಮೂರು ವರ್ಷದ ಮಗ ಸಹ ಅಲ್ಲಿಯೇ ಉಳಿದಿದ್ದರು. ಜುಲೈ 31ರಂದು ಚಂದ್ರಶೇಖರ ಸಿದ್ದಿ ಅವರು ಅಂಗನವಾಡಿಗೆ ಹೋಗಿದ್ದ ಮಗನನ್ನು ಮನೆಗೆ ಕರೆತಂದಿದ್ದರು. ನಂತರ ಬೆಟ್ಟಕ್ಕೆ ಹೋಗಿದ್ದ ಅವರು ಅಲ್ಲಿಯೇ ನೇಣು ಹಾಕಿಕೊಂಡಿದ್ದರು.
ಚಂದ್ರಶೇಖರ ಸಿದ್ದಿ ಅವರ ಸಾವಿನ ಬಗ್ಗೆ ಅವರ ತಾಯಿ ಲಕ್ಷ್ಮೀ ಸಿದ್ದಿ ಅವರು ಸಂಶಯವ್ಯಕ್ತಪಡಿಸಿದ್ದರು. 2020ರಲ್ಲಿ ಚಂದ್ರಶೇಖರ ಸಿದ್ದಿ ಅವರ ತಂದೆ ನಾಗಪ್ಪ ಸಿದ್ದಿ ಅವರೂ ಆತ್ಮ*ಹತ್ಯೆಗೆ ಶರಣಾಗಿದ್ದರು. ಮಗ ಸಹ ಅದೇ ದಾರಿ ತುಳಿದ ಬಗ್ಗೆ ಲಕ್ಷ್ಮೀ ಸಿದ್ದಿ ನೋವು ತೋಡಿಕೊಂಡಿದ್ದರು. ಧಾರಾವಾಹಿಯಲ್ಲಿ ಪಾತ್ರ ಮಾಡಿ ಮನೆಗೆ ಬಂದಿದ್ದ ಮಗ ಕೋಟೆಮನೆಯಲ್ಲಿ ಕೆಲಸ ಸಿಕ್ಕಿದ್ದರಿಂದ ಅಲ್ಲಿ ವಾಸವಾಗಿದ್ದ. ಆದರೆ, ಆತ ಮತ್ತೆ ಮನೆಗೆ ಮರಳಲೇ ಇಲ್ಲ’ ಎಂದು ಕಣ್ಣೀರು ಹಾಕಿದ್ದರು.
`ಚಂದ್ರಶೇಖರ ಸಿದ್ದಿ ಮದ್ಯಪಾನ ಮಾಡಿದಾಗಲೆಲ್ಲ ನನಗೆ ಹೊಡೆಯುತ್ತಿದ್ದ. ನನ್ನ ಮೇಲೆ ಅನಗತ್ಯ ಅನುಮಾನ ಪಡುತ್ತಿದ್ದ. ಆರು ತಿಂಗಳ ಹಿಂದೆ ಈ ಬಗ್ಗೆ ಪೊಲೀಸರಿಗೆ ದೂರಿದಾಗ ರಾಜಿ-ಸಂಧಾನ ನಡೆದಿತ್ತು. ನಂತರ ನಾವು ಒಂದಾಗಿ ಸಂಸಾರ ನಡೆಸುತ್ತಿದ್ದೆವು. ನನಗೂ ನಾಟಕ ತರಬೇತಿ ನೀಡುವುದಾಗಿ ಚಂದ್ರಶೇಖರ್ ಸಿದ್ದಿ ಹೇಳಿದ್ದರು. ನಮ್ಮ ನಡುವೆ ಸದ್ಯ ಯಾವುದೇ ಸಮಸ್ಯೆ ಇರಲಿಲ್ಲ’ ಎಂದು ಚಂದ್ರಶೇಖರ ಸಿದ್ದಿ ಅವರ ಪತ್ನಿ ವನಜಾಕ್ಷಿ ಸಿದ್ದಿ ಹೇಳಿದ್ದಾರೆ.
ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೊ ಬೇರೆಯದೇ ಕಥೆ ಹೇಳುತ್ತಿದೆ.