‘ಸ್ವಚ್ಛ ಭಾರತ, ಸ್ವಚ್ಛ ಭಾರತ’ ಎಂದು ದೊಡ್ಡದಾಗಿ ಹಾಡು ಹಚ್ಚಿಕೊಂಡು ಬರುವ ಯಲ್ಲಾಪುರದ ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿಯ ಸಿಬ್ಬಂದಿಗೆ ರಸ್ತೆಯ ಪಕ್ಕದಲ್ಲೇ ವರ್ಷಗಳಿಂದ ಬಿದ್ದಿರುವ ಕಸದ ರಾಶಿ ಕಾಣದೇ ಇರುವುದು ವಿಚಿತ್ರ, ಆದರೂ ಸತ್ಯ.
ಯಲ್ಲಾಪುರದ ಮುಂಡಗೋಡ ರಸ್ತೆಯ ಪಕ್ಕ ಬಿ.ಎಸ್.ಎನ್.ಎಲ್ ವಸತಿಗೃಹ ಸಂಕೀರ್ಣದ ಎದುರು ಕಸದ ರಾಶಿಯೇ ಇದೆ. ವರ್ಷ ಕಳೆದರೂ ಅದರ ವಿಲೇವಾರಿಗೆ ಸಂಬಂಧಪಟ್ಟವರು ಗಮನ ಹರಿಸಿಲ್ಲ.
ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ವಾಹನ ಕಸ ಸಂಗ್ರಹಣೆಗಾಗಿ ಅದೇ ರಸ್ತೆಯಲ್ಲಿ ಸಂಚರಿಸುತ್ತದೆ. ರಸ್ತೆಯ ಪಕ್ಕವೇ ಬಿದ್ದಿರುವ ರಾಶಿ ರಾಶಿ ಅದರ ಸಿಬ್ಬಂದಿಯ ಕಣ್ಣಿಗೆ ಕಾಣುತ್ತಿಲ್ಲವೇ ಎಂಬ ಪ್ರಶ್ನೆ ಮೂಡುವಂತಿದೆ.
ಕಸದ ರಾಶಿಯ ನಡುವೆಯೇ ಕಸದ ತೊಟ್ಟಿಯೊಂದು ಬಿದ್ದುಕೊಂಡಿದೆ. ನೋಡುವವರಿಗೆ ಅದೂ ಕಸವೇ ಇರಬಹುದೆಂಬ ಭಾವನೆ ಮೂಡಿಸುತ್ತದೆ. ಮಳೆಯ ನೀರೂ ಕಸದೊಂದಿಗೆ ಸೇರಿ ಸೊಳ್ಳೆಗಳ ಉಗಮ ಸ್ಥಾನವಾಗಿ ಮಾರ್ಪಟ್ಟಿದೆ.
ಸ್ವಚ್ಛತೆಯ ಬಗ್ಗೆ ಭಾಷಣ ಮಾಡುವ ಸ್ಥಳೀಯ ಆಡಳಿತದ ಘಟಾನುಘಟಿ ನಾಯಕರು, ಇಂತಹ ಅವ್ಯವಸ್ಥೆ ಸರಿಪಡಿಸುವ ಬಗ್ಗೆ ಗಮನ ಹರಿಸಿದರೆ ಭಾಷಣಕ್ಕೊಂದು ಅರ್ಥ ಬಂದೀತು.