ಯಲ್ಲಾಪುರ ಬಸ್ ಘಟಕದಿಂದ ಹೆಗ್ಗಾರ ಭಾಗಕ್ಕೆ ಬಸ್ ಓಡಾಟ ನಾಲ್ಕು ವರ್ಷಗಳ ನಂತರ ಪುನರಾರಂಭಗೊಂಡಿದೆ.
ನಾಲ್ಕು ವರ್ಷಗಳ ಹಿಂದೆ ಗುಳ್ಳಾಪುರದ ಸೇತುವೆ ಕುಸಿದ ನಂತರ ಈ ಭಾಗಕ್ಕೆ ಬಸ್ ಓಡಾಟ ನಿಂತಿತ್ತು. ರಾಮನಗುಳಿ ಸೇತುವೆ ಆದ ನಂತರ ಜನಾಗ್ರಹಕ್ಕೆ ಮಣಿದು ಕಮ್ಮಾಣಿಗೆ ಬಸ್ ಓಡಾಟ ಆರಂಭಿಸಲಾಗಿತ್ತು. ಆದರೆ ಹೆಗ್ಗಾರ ಭಾಗ ಮಾತ್ರ ಇದರಿಂದ ವಂಚಿತವಾಗಿತ್ತು.
ಈಗ ಕಮ್ಮಾಣಿವರೆಗೆ ಹೋಗುತ್ತಿದ್ದ ಬಸ್ ನ್ನೇ ಸ್ಥಳೀಯರ ಆಗ್ರಹದ ಮೇರೆಗೆ ಹೆಗ್ಗಾರವರೆಗೂ ಪ್ರತಿನಿತ್ಯ ಓಡಾಡುವಂತೆ ಬಸ್ ಘಟಕದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಇದರಿಂದ ಹೆಗ್ಗಾರ ಹಾಗೂ ಸುತ್ತಮುತ್ತಲಿನ ಭಾಗದ ವಿದ್ಯಾರ್ಥಿಗಳು, ಕೃಷಿ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ.
ನಾಲ್ಕು ವರ್ಷಗಳ ನಂತರ ಊರಿಗೆ ಬಂದ ಬಸ್ ಗೆ ಪೂಜೆ ಸಲ್ಲಿಸಿ, ಬರಮಾಡಿಕೊಳ್ಳಲಾಯಿತು. ಪ್ರಮುಖರಾದ ವಿ.ವಿ.ಜೋಶಿ, ಎನ್.ಎನ್.ಹೆಬ್ಬಾರ, ಮಹಾಬಲೇಶ್ವರ ಭಟ್ಟ, ರಾಮಕೃಷ್ಣ ಗಾಂವ್ಕರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.