ಪರೀಕ್ಷೆಗಳು ಎಂದರೆ ಕೇವಲ ಜ್ಞಾನದ ಪರೀಕ್ಷೆ ಮಾತ್ರವಲ್ಲ ಬದಲಿಗೆ ಅವು ಸ್ಪರ್ಧಾರ್ಥಿಗಳ ತಾಳ್ಮೆ, ದೃಢಸಂಕಲ್ಪ ಮತ್ತು ಆತ್ಮವಿಶ್ವಾಸದ ಪರೀಕ್ಷೆ ಕೂಡ ಹೌದು. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಲಕ್ಷಾಂತರ ಅಭ್ಯರ್ಥಿಗಳ ನಡುವೆ ಸ್ಪರ್ಧಿಸಿ ಯಶಸ್ಸು ಗಳಿಸಬೇಕೆಂದರೆ ಸಂಬಂಧಿಸಿದ ವಿಷಯ ಜ್ಞಾನದ ಜೊತೆಗೆ ಅಭ್ಯರ್ಥಿಗಳಿಗೆ ದೃಢವಾದ ಆತ್ಮವಿಶ್ವಾಸ ಅತ್ಯಗತ್ಯವಾಗಿ ಬೇಕು.
ಸ್ಪಧಾರ್ಥಿಗಳಿಗೆ ಆತ್ಮವಿಶ್ವಾಸ ಏಕೆ ಮುಖ್ಯ?
ಒತ್ತಡ ನಿರ್ವಹಣೆಯನ್ನು ಅಳವಡಿಸಿಕೊಳ್ಳಲು: ಸ್ಪರ್ಧಾತ್ಮಕ ಪರೀಕ್ಷೆಗಳ ಸಂದರ್ಭದ ಪೂರ್ವ ತಯಾರಿ ಮಾಡುವಾಗ ಮತ್ತು ಅಂತಿಮ ಪರೀಕ್ಷಾ ದಿನದಂದು ಅಭ್ಯರ್ಥಿಗಳು ಅಪಾರ ಒತ್ತಡವನ್ನು ಅನುಭವಿಸುತ್ತಾರೆ ಗೊಂದಲಕ್ಕೆ ಒಳಗಾಗುತ್ತಾರೆ. ಆದರೆ ಆತ್ಮವಿಶ್ವಾಸವುಳ್ಳ ವ್ಯಕ್ತಿಗಳು ಈ ಒತ್ತಡವನ್ನು ನಿಭಾಯಿಸಲು ಸಶಕ್ತರಾಗಿರುತ್ತಾರೆ. ಆತ್ಮವಿಶ್ವಾಸವುಳ್ಳ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗದೆ ತಮ್ಮ ಸಾಮರ್ಥ್ಯಗಳನ್ನು ನಂಬಿ ಪರೀಕ್ಷೆಯನ್ನು ಎದುರಿಸುತ್ತಾರೆ.
ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು: ಪರೀಕ್ಷಾ ಸಮಯದಲ್ಲಿ ಅಂದರೆ ಒದಗಿಸಿದ ಸೀಮಿತ ಸಮಯದ ಅವಧಿಯಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಆತ್ಮವಿಶ್ವಾಸವುಳ್ಳ ಅಭ್ಯರ್ಥಿಗಳು ಗೊಂದಲಕ್ಕೊಳಗಾಗದೆ ತಾವು ಓದಿರುವ ಮಾಹಿತಿಯನ್ನು ಸಮರ್ಥವಾಗಿ ಬಳಸಿಕೊಂಡು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.
ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಲು: ಪರೀಕ್ಷಾ ತಯಾರಿಯ ಹಾದಿಯಲ್ಲಿ ಹಲವು ಅಡೆತಡೆಗಳು ಸೋಲುಗಳು ಎದುರಾಗುವುದು ಸಾಮಾನ್ಯ. ಆದರೆ ಆತ್ಮವಿಶ್ವಾಸವುಳ್ಳವರು ನಕಾರಾತ್ಮಕ ಆಲೋಚನೆಗಳಿಗೆ ಒಳಗಾಗದೆ ಸಕಾರಾತ್ಮಕ ಮನೋಭಾವದಿಂದ ಮುಂದುವರಿಯುತ್ತಾರೆ. ಇದು ‘ನನ್ನಿಂದ ಸಾಧ್ಯ’ ಎಂಬ ನಂಬಿಕೆ ಅವರನ್ನು ಗುರಿಯೆಡೆಗೆ ಕರೆದೊಯ್ಯುತ್ತದೆ.
ಏಕಾಗ್ರತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು: ಆತ್ಮವಿಶ್ವಾಸವು ಅಭ್ಯರ್ಥಿಗಳಿಗೆ ಪರೀಕ್ಷೆಯ ಸಮಯದಲ್ಲಿ ಉತ್ತಮವಾಗಿ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ತಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಇರುವಾಗ ಅನಗತ್ಯ ಗೊಂದಲಗಳಿಂದ ದೂರವಾಗಿ ಪ್ರಶ್ನೆಗಳ ಮೇಲೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಗುತ್ತದೆ. ಇದರಿಂದ ಸ್ಪಧಾರ್ಥಿಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.
ಸೋಲುಗಳಿಂದ ಕಲಿತುಕೊಳ್ಳಲು: ಯಾವುದೇ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗದಿದ್ದಾಗ ಆತ್ಮವಿಶ್ವಾಸವು ದೃತಿಗೆಡದೆ, ವೈಫಲ್ಯಗಳನ್ನು ಕಲಿಕೆಯ ಮೆಟ್ಟಿಲುಗಳನ್ನಾಗಿ ಪರಿಗಣಿಸಲು ಸಹಾಯ ಮಾಡುತ್ತದೆ. ‘ಈ ಬಾರಿ ನಾನು ಎಲ್ಲಿ ತಪ್ಪು ಮಾಡಿದೆ, ಮುಂದಿನ ಬಾರಿ ಹೇಗೆ ಸುಧಾರಿಸಬೇಕು’ ಎಂದು ವಿಶ್ಲೇಷಿಸಲು ಇದು ಪ್ರೇರಣೆ ನೀಡುತ್ತದೆ.
ಸಮಯ ನಿರ್ವಹಣೆಯನ್ನು ಅಳವಡಿಸಿಕೊಳ್ಳಲು: ಪರೀಕ್ಷೆಯ ತಯಾರಿಯಲ್ಲಿ ಸಮಯ ನಿರ್ವಹಣೆ ಬಹಳ ಮುಖ್ಯ. ಆತ್ಮವಿಶ್ವಾಸವುಳ್ಳ ಅಭ್ಯರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತಿರುವುದರಿಂದ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳುವಲ್ಲಿ ಯಶಸ್ವಿಯಾಗುತ್ತಾರೆ.
ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಮಾರ್ಗಗಳು-
ಸಂಪೂರ್ಣ ಸಿದ್ಧತೆ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಗ್ರವಾದ ಮತ್ತು ಕ್ರಮಬದ್ಧವಾದ ಸಿದ್ಧತೆ ಆತ್ಮವಿಶ್ವಾಸದ ಪ್ರಮುಖ ಮೂಲವಾಗಿದೆ. ಎಲ್ಲಾ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡುವುದು, ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಮತ್ತು ಅಣುಕು ಪರೀಕ್ಷೆಗಳನ್ನು ಬರೆಯುವುದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ನಿಮ್ಮ ಸಾಮರ್ಥ್ಯಗಳನ್ನು ಅರಿತುಕೊಳ್ಳಿ: ನಿಮ್ಮ ಬಲವಾದ ಮತ್ತು ದುರ್ಬಲವಾದ ವಿಷಯಗಳನ್ನು ಗುರುತಿಸಿ. ನಿಮ್ಮ ಬಲವಾದ ವಿಷಯಗಳ ಬಗ್ಗೆ ಹೆಚ್ಚು ನಂಬಿಕೆ ಇಟ್ಟುಕೊಳ್ಳಿ ಮತ್ತು ದುರ್ಬಲ ವಿಷಯಗಳನ್ನು ಸುಧಾರಿಸಲು ಶ್ರಮಿಸಿ.
ಗುರು-ಹಿರಿಯರ ಮಾರ್ಗದರ್ಶನ: ತರಬೇತಿ ಕೇಂದ್ರಗಳ ಅಥವಾ ಅನುಭವಿ ಮಾರ್ಗದರ್ಶಕರ ಸಲಹೆ ಪಡೆಯುವುದು ನಿಮ್ಮ ಸಿದ್ಧತೆಗೆ ಸರಿಯಾದ ದಿಕ್ಕನ್ನು ನೀಡುತ್ತದೆ ಮತ್ತು ನಿಮ್ಮಲ್ಲಿ ನಂಬಿಕೆ ಮೂಡಿಸುತ್ತದೆ.
ಸಕಾರಾತ್ಮಕ ಜನರಿಂದ ಸುತ್ತುವರಿದಿರಿ: ನಕಾರಾತ್ಮಕ ಅಥವಾ ನಿಮ್ಮನ್ನು ನಿರುತ್ಸಾಹಗೊಳಿಸುವ ಜನರಿಂದ ದೂರವಿರಿ. ನಿಮ್ಮ ಪ್ರಯತ್ನಗಳನ್ನು ಬೆಂಬಲಿಸುವ ಮತ್ತು ಸಕಾರಾತ್ಮಕವಾಗಿ ಉತ್ತೇಜಿಸುವ ಜನರೊಂದಿಗೆ ಸಮಯ ಕಳೆಯಿರಿ.
ಸಣ್ಣ ಗುರಿಗಳನ್ನು ನಿಗದಿಪಡಿಸಿ: ಮೊದಲು ದೈನಂದಿನ ಅಥವಾ ವಾರದ ಗುರಿಗಳನ್ನು ನಿಗದಿಪಡಿಸಿ, ಅವುಗಳನ್ನು ಸಾಧಿಸುತ್ತಾ ಹೋದಾಗ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.
ವೈಯಕ್ತಿಕ ಆರೋಗ್ಯಕ್ಕೆ ಗಮನ: ಉತ್ತಮ ನಿದ್ರೆ, ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ, ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಧ್ಯಾನ ಮತ್ತು ವಿಶ್ರಾಂತಿ: ಒತ್ತಡವನ್ನು ಕಡಿಮೆ ಮಾಡಲು ಧ್ಯಾನ ಅಥವಾ ಇತರ ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡುವುದು ಸಹಕಾರಿ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲ, ದೃಢವಾದ ಆತ್ಮವಿಶ್ವಾಸವೂ ಅಷ್ಟೇ ಮುಖ್ಯ. ಇದನ್ನು ನಿರಂತರ ಪ್ರಯತ್ನ ಮತ್ತು ಸಕಾರಾತ್ಮಕ ಮನೋಭಾವದಿಂದ ಸ್ಪರ್ಧಾರ್ಥಿಗಳು ಬೆಳೆಸಿಕೊಳ್ಳಬಹುದಾಗಿದೆ.
| ರವಿ ಶೇಷಗಿರಿ
ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ ಕಾಲೇಜು ಯಲ್ಲಾಪುರ.