ಯಲ್ಲಾಪುರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ 79 ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ಟ ಧ್ವಜಾರೋಹಣ ನೆರವೇರಿಸಿದರು. ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ, ಪ್ರಮುಖರಾದ ವಿಜಯ ಮರಾಶಿ, ರವಿ ಭಟ್ಟ ಬರಗದ್ದೆ, ಶಿರೀಷ ಪ್ರಭು, ಎಂ.ಡಿ.ಮುಲ್ಲಾ ಹಾಗೂ ಪಕ್ಷದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ ಹೆಬ್ಬಾರ ಭಾಗವಹಿಸಿ, ಮಾತನಾಡಿದರು. ಬಿಜೆಪಿಯಿಂದ ಉಚ್ಛಾಟನೆಯಾದ ನಂತರ ಸ್ವತಂತ್ರವಾಗಿರುವ ಶಾಸಕ ಹೆಬ್ಬಾರ, ಮೊದಲ ಬಾರಿಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡರು.
ಈ ಹಿಂದೆ ಶಾಸಕ ಹೆಬ್ಬಾರ ಕಾಂಗ್ರೆಸ್ ನಲ್ಲಿದ್ದಾಗ ಅವರ ಕಟ್ಟಡವೇ ಕಾಂಗ್ರೆಸ್ ಕಚೇರಿಯಾಗಿತ್ತು. ಹೆಬ್ಬಾರ ಬಿಜೆಪಿಗೆ ಬಂದು ಸಚಿವರಾದ ನಂತರ ಅದೇ ಬೋರ್ಡ್ ಬದಲಾಯಿಸಿ, ಬಿಜೆಪಿ ಕಾರ್ಯಾಲಯವಾಗಿತ್ತು.
2023 ರ ಚುನಾವಣೆಯಲ್ಲಿ ಗೆದ್ದ ನಂತರ ಹೆಬ್ಬಾರ ಅಚರು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಆಗ ಬಿಜೆಪಿಯವರು ಅಲ್ಲಿಂದ ಹೊರಹೋಗಿ ಬೇರೆ ಕಾರ್ಯಾಲಯ ಆರಂಭಿಸಿದ್ದರು. ಬಿಜೆಪಿಯಿಂದ ಹೆಬ್ಬಾರ ಉಚ್ಛಾಟನೆಯಾಗುತ್ತಿದ್ದಂತೆ ಕಾಂಗ್ರೆಸ್ ನವರು ಮತ್ತೆ ತವರಿಗೆ ಮರಳಿದ್ದಾರೆ. ಸದ್ಯದಲ್ಲೇ ಹೆಬ್ಬಾರ ಸಹ ಮರಳುವರೆ ಎಂಬ ಪ್ರಶ್ನೆಗೆ ಈ ದಿನದ ಕಾರ್ಯಕ್ರಮ ‘ಹೌದು’ ಎಂಬ ಉತ್ತರ ನೀಡುವಂತಿದೆ.
ಹೆಬ್ಬಾರ ಪುತ್ರ ವಿವೇಕ ಹೆಬ್ಬಾರ ಅವರೂ ಕೆಪಿಸಿಸಿ ಸದಸ್ಯರಾಗಿದ್ದು, ಈಗ ಹೆಬ್ಬಾರ ಅವರೂ ಬಹಿರಂಗವಾಗಿ ಜೊತೆಯಾಗಿರುವುದು ಕಾಂಗ್ರೆಸ್ ಗೆ ಬಲ ತುಂಬಿದೆ.