ಯಲ್ಲಾಪುರದ ಕಾಳಮ್ಮಾನಗರ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ 79ನೇಯ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಾರ್ವಜನಿಕ ಧ್ವಜಾರೋಹಣವನ್ನು ತಹಶಿಲ್ದಾರ ಚಂದ್ರಶೇಖರ ಹೊಸ್ಮನಿ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಎಲ್ಲರಿಗೂ ಮೂಲಭೂತ ಹಕ್ಕುಗಳಿದ್ದು, ನಮ್ಮ ಹಕ್ಕಿನ ಬಳಕೆ ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು. ಎಲ್ಲರೂ ಶಾಂತಿ ಸಾಮರಸ್ಯದಲ್ಲಿ ಬದುಕಬೇಕು. ಸ್ಥಳೀಯವಾಗಿ ಪರಿಸರ ಸ್ನೇಹಿ ಆರೋಗ್ಯ ಕಾಪಾಡುವ ಉತ್ಪನ್ನ ತಯಾರಿಕೆಗೆ ರೈತರು ಮುಂದಾಗಬೇಕು ಎಂದರು.
ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಭಾರತ ದೇಶ ಬಲಿಷ್ಠ ರಾಷ್ಟ್ರ ಆಗಬೇಕು. ಯುವಕರಿಗೆ ಸ್ವಾತಂತ್ರ್ಯ ಹೋರಾಟ ಪ್ರೇರಣೆ ಆಗಲಿ. ನವ ಭಾರತ ನಿರ್ಮಾಣದಲ್ಲಿ ಯುವಕರು ಯೋಗದಾನ ಮಾಡಬೇಕು’ ಎಂದರು.
ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಪಪಂ ಅಧ್ಯಕ್ಷೆ
ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ ಅಂಗಡಿ, ಸಿಪಿಐ ರಮೇಶ ಹಾನಾಪುರ, ತಾಪಂ ಇಒ ರಾಜೇಶ ಧನವಾಡಕರ, ಭಾಗವಹಿಸಿದ್ದರು. ಬಿಇಒ ರೇಖಾ ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ಪ್ರಶಾಂತ ಪಟಗಾರ, ಚಂದ್ರಹಾಸ ನಾಯ್ಕ ನಿರ್ವಹಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ ವಂದಿಸಿದರು.
ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕಾ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಅವರನ್ನು ಸಮಾರಂಭದ ವೇದಿಕೆಯಲ್ಲಿ ಕರೆಯದೇ ಇರುವುದು ನೌಕರರ ಅಸಮಾಧಾನಕ್ಕೆ ಕಾರಣವಾಯಿತು. ಸ್ವಾಗತ ಭಾಷಣದಲ್ಲಿ ಅಧಿಕಾರಿಯೊಬ್ಬರ ಸೂಚನೆಯಂತೆ ಅವರಿಗೆ ಸ್ವಾಗತ ಕೋರಲಾಯಿತು. ಆದರೆ ನಿರ್ವಹಣೆ ಮಾಡುವವರು ಅವರನ್ನು ವೇದಿಕೆಗೆ ಆಹ್ವಾನಿಸಲೇ ಇಲ್ಲ. ಸ್ವಾಗತ ಮಾಡಿ, ವೇದಿಕೆಗೆ ಕರೆಯದೇ ಇರುವ ಈ ಸಂಪ್ರದಾಯ ವಿಚಿತ್ರವಾಗಿತ್ತು.