ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅದರಲ್ಲಿ ಆಸಕ್ತಿ, ಶ್ರದ್ಧೆ, ಪರಿಶ್ರಮ ಎಲ್ಲವೂ ಮೇಳೈಸಿದಾಗ ಮಾತ್ರ ಉತ್ತಮ ಕಲಾವಿದ ರೂಪುಗೊಳ್ಳಲು ಸಾಧ್ಯ. ಈ ಎಲ್ಲವನ್ನೂ ರೂಢಿಸಿಕೊಂಡು ರಂಗು ರಂಗಿನ ರಂಗೋಲಿಯ ಕಲೆಯಲ್ಲಿ ಉತ್ತಮ ಕಲಾವಿದರಾಗಿ ರೂಪುಗೊಳ್ಳುತ್ತಿದ್ದಾರೆ ಯಲ್ಲಾಪುರ ತಾಲೂಕಿನ ಕವಡಿಕೆರೆಯ ನಾಗರಾಜ ಸುಬ್ರಾಯ ಭಟ್ಟ ಅವರು.
ನಾಗರಾಜ ಅವರಿಗೆ ರಂಗೋಲಿಯ ಕುರಿತಾಗಿ ಬಾಲ್ಯದಿಂದಲೇ ಆಸಕ್ತಿ. ವೃತ್ತಿಯಲ್ಲಿ ವೈದಿಕರಾಗಿರುವ ನಾಗರಾಜ ಭಟ್ಟರು ಕಾರ್ಯಕ್ರಮಗಳಿಗೆ ಹೋದಾಗ ರಂಗೋಲಿ ಬಿಡಿಸುತ್ತಿದ್ದರು.
ಈ ಕಲೆಯನ್ನು ಸರಿಯಾಗಿ ಕಲಿಯಬೇಕೆಂಬ ಉದ್ದೇಶದಿಂದ ಮೈಸೂರಿನ ರಾಘವೇಂದ್ರ ರಾವ್ ಹಾಗೂ ಗಣೇಶ ಖರೆ ಎಂಬವರಲ್ಲಿ ಅಭ್ಯಾಸ ಮಾಡಿದರು. ಆರಂಭಿಕ ಹಂತದಿಂದ ಹಿಡಿದು ಬಾಡಿ ಅನಾಟಮಿ, ಅಡ್ವಾನ್ಸ್, ಮಾಸ್ಟರ್, ಸೆಮಿ ರಿಯಲಿಸ್ಟಿಕ್, ರಿಯಲಿಸ್ಟಿಕ್, ಪೋರ್ಟರೇಟ್ ಮುಂತಾದ ವಿಧಾನಗಳನ್ನು ಕಲಿತರು.
ರಂಗೋಲಿ ಕಲೆಯಲ್ಲಿ ನೈಪುಣ್ಯತೆ ಗಳಿಸುತ್ತ ಕಳೆದ ಮೂರು ವರ್ಷಗಳಿಂದ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷ ಹಬ್ಬ ಹರಿದಿನಗಳಲ್ಲಿ ಆ ಹಬ್ಬಕ್ಕೆ ಸಂಬಂಧಿಸಿದಂತೆ ಆಕರ್ಷಕವಾದ ರಂಗೋಲಿ ಬಿಡಿಸುತ್ತಾರೆ.
ಶಿವರಾತ್ರಿ, ದತ್ತ ಜಯಂತಿ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ರಾಮನವಮಿ, ಮುಂತಾದ ಹಬ್ಬಗಳಲ್ಲಿ ವಿಶಿಷ್ಟ ರಂಗೋಲಿಗಳನ್ನು ಬಿಡಿಸುತ್ತಾರೆ. ಚಂದಗುಳಿಯ ಘಂಟೆ ಗಣಪತಿ, ಯಕ್ಷಗಾನ ಭಾಗವತರಾದ ವಿದ್ವಾನ್ ಗಣಪತಿ ಭಟ್ಟ, ದಿ.ಸುಬ್ರಹ್ಮಣ್ಯ ಧಾರೇಶ್ವರ ಅವರ ರಂಗೋಲಿ..ಹೀಗೆ ನಾಗರಾಜ ಅವರಿಂದ ರಚಿತವಾದ ಹತ್ತಾರು ರಂಗೋಲಿಗಳು ಜಾಲತಾಣಗಳಲ್ಲಿ ಜನಮೆಚ್ಚುಗೆ ಗಳಿಸಿವೆ.
ಕಲೆಯಲ್ಲಿ ಅವರ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂಬ ಆಶಯ ನಮ್ಮದು.