ಪೇಟೆಗೆ ಹೋಗುವ ಮೊದಲು ಹತ್ತು ಬಾರಿ ತಲೆ ಕೆಡಿಸಿಕೊಳ್ಳಬೇಕಿದೆ. ಮೂತ್ರ ವಿಸರ್ಜನೆ ಮಾಡುವುದೇ ದೊಡ್ಡ ಸಮಸ್ಯೆ.ಬಿಡ್ರಿ…ಅದೇನ್ ಮಹಾ ಉಚ್ಚಿ ಬಂದಾಗ ಖಾಲಿ ಮಾಡಿದ್ರಾಯ್ತು ಅಂತೀರಾ? ಉಂಹೂ…..ಅದಕ್ಕೆಲ್ಲಿದೆ ಅವಕಾಶ? ಬೆಳಿಗ್ಗೆ ಮನೆ ಬಿಟ್ಟರೆ ಸಂಜೆ ಮನೆಗೆ ಬಂದೇ ಮೂತ್ರ ವಿಸರ್ಜನೆ ಮಾಡಬೇಕು.
ಕಾರಣ ಯಲ್ಲಾಪುರದ ಆಡಳಿತ ವ್ಯವಸ್ಥೆ ಕೆಲವು ವರ್ಷಗಳಿಂದೀಚೆಗೆ ಅಷ್ಟರಮಟ್ಟಿಗೆ ಶಿಸ್ತು ಬದ್ಧವಾಗಿ ಹದಗೆಟ್ಟಿದೆ. ಎಷ್ಟು ಕೆರಾ ಹಿಡಿದಿದೆಯೆಂದರೆ ಯಾರಾದರೂ ದಾರಿಹೋಕರು ಇಲ್ಯಾಕೆ ಉಚ್ಚಿ ಹೊಯ್ತ್ಯೋ ಎಂದು ಅಪ್ಪಿತಪ್ಪಿ ಪ್ರಶ್ನೆ ಮಾಡಿದರೆ, ನಿನ್ನೆ ತಲೆ ಮೇಲೆ ಹೊಯ್ಯಲೇ ಎಂದು ಅವಾಜ್ ಹಾಕಿಸಿಕೊಳ್ಳಬೇಕು.
ನಿನ್ನೆ ನಡೆದದ್ದೂ ಅದೇ, ದಾರಿ ಅಂಚಿನಲ್ಲಿ ಉಚ್ಚೆ ಬಿಡಡಾ ಅಂದೆ.ನಿನ್ನ ಅಪ್ಪನ ಮನೆ ಜಾಗಾನಾ, ನಿನ್ನ ಶಾಸಕರಿಗೆ ಹೋಗಿ ಹೇಳು ಅಂದ್ಬಿಟ್ಟ. ಛೇ ನೀ.. ಉಚ್ಚಿ ಬಿಡೋ ವಿಷ್ಯ ಶಾಸಕರಿಗ್ಯಾಕೆ ಹೇಳ್ಬೇಕು? ನನಗೇನು ಬೇರೆ ಕೆಲಸ ಇಲ್ಲವೇ ಅಂದೆ. ಕಳ್ಳ್ ..ಸೋಮಾರಿ ಶಾಸಕನೆಂದಲ್ಲ ರೇಗಾಡಿದ. ಆವೇಶಭರಿತ ಆತನ ಮಾತಿನಲ್ಲೂ ಸೊಗಸಾದ ಅರ್ಥವಿದಯಲ್ಲವೆಂದು ಯಾವನಿಗಾದರೂ ಅನಿಸಲೇ ಬೇಕು.
ಜೊರೊ ಜೊರೊ ಮಳೆಯಲ್ಲಿ ಮೂತ್ರ ಮಾಡವ ಲಗುಬಗೆ ಬೇರೆ. ಹತ್ತರಿಕೆ, ಸ್ವಲ್ಪ ಉಚ್ಚೆ ಬಿಡೂಲರು ಬಿಡಿ. ಉಚ್ಚಿ ಬಂದು ಕಟ್ಟಿದಾಗ ಕಟ್ಟೊಡೆದರೆ ಸಾಕು, ಉಚ್ಚಿ ಕಟ್ಟಿದಾಗಿನ ಕಷ್ಟಕ್ಕೂ, ಉಚ್ಚೆ ಬಿಟ್ಟಾಗಿನ ಸುಖಕ್ಕೂ ಇರುವ ವ್ಯತ್ಯಾಸವನ್ನು ಬಲ್ಲವನೇ ಬಲ್ಲ, ಏನಂತೀರಾ ?
ಕೆಲವು ದಿನಗಳ ಹಿಂದೆ ಶಿರಸಿಯ ಮೂತ್ರ ವಿಸರ್ಜನಾ ಸ್ಥಳದ ಕುರಿತು ಮಿತ್ರ ಪರಮಾನಂದ ಹೆಗಡೆಯವರು ವಿಸ್ತೃತ ವರದಿ ಮಾಡಿದ್ದರು .ಈಗ ಯಲ್ಲಾಪುರ ತಾನೇನು ಕಡಿಮೆಯಿಲ್ಲವೆಂದು ಮುನ್ನೆಲೆಗೆ ಬರುವ ಸರದಿ. ಯಾರಾದರೂ ವೇಗವಾಗಿ ಬೈಕ್ ಓಡಿಸುತ್ತಿದ್ದಾರೆಂದರೆ ಅರ್ಜಂಟ್ ವಿಷಯವೆಂದು ಸರ್ವೇ ಸಾಮಾನ್ಯ. ಅದರಲ್ಲೂ ಉಚ್ಚಿ ಪ್ರಕರಣವೆಂದರೆ ತುಸು ಜಾಸ್ತಿಯೇ. ಸ್ವಲ್ಪ ತಡೀರಿ ಇಲ್ಲೇ ಒಂದ್ನಿಮಿಷ ಹೋಗಿ ಬರೋಣ ಅಂದ್ರೆ ಸಾಕು, ವೈದ್ಯ ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಉಚ್ಚಿ ಭಾಗ್ಯ.! ಅಂದಂಗಾಯ್ತು. ಮುಖವೆಲ್ಲ ಅರಳಿ ಮಲ್ಲಿಗೆಯ ಪರಿಮಳ ಬೀರಿದ ಕಮಲದಂತೆ ಕಂಗೊಳಿಸುತ್ತದೆ. ಬೈಕ್ ಸ್ಟಾರ್ಟ್ ಮಾಡಿ ಹಲಸ್ಖಂಡ ರಸ್ತೆಯಲ್ಲಿ ಉಚಿತ ಮೂತ್ರ ವಿಸರ್ಜನೆ.
ಪಾಪ ಈ ರಸ್ತೆ ತನ್ನ ಉಚಿತ ಸೇವೆಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಬಂದಿದೆ. ಕರೆಂಟ್ ಕಂಬಗಳನ್ನು ತನ್ನ ಮಗ್ಗುಲಲ್ಲೇ ಇರಿಸಿಕೊಂಡಿದೆ. ಅದರ ಮೇಲೆ ಕುಳಿತು ಎಣ್ಣೆ ಹೊಡೆಯುವುದಕ್ಕೂ ಜಾಗ ಮಾಡಿಕೊಟ್ಟಿದೆ. ಪಕ್ಕದಲ್ಲೇ ರಾಶಿ, ರಾಶಿ ಕಸಗಳನ್ನು ಹೊತ್ತುಕೊಂಡಿದೆ. ಅಯ್ಯೋ….ಪಾಪ ನೀವೇನು ತಪ್ಪು ಮಾಡಿದ್ರಪ್ಪ, ಬನ್ನಿ… ಬನ್ನಿ ಉಚ್ಚೆನೂ ಹೊಯ್ಕೈಳಿ ಎಂದು ಕೈಬೀಸಿ ಕರೆದು ಮಡಿಲು ತುಂಬಿಸಿಕೊಳ್ಳುತ್ತಿದೆ.
ಥೂ….ನಿಮ್ಮ ಜನ್ಮಕಷ್ಟು ಬೆಂಕಿ ಹಾಕ, ಪಟ್ಟಣ ಪಂಚಾಯತ್ ಇರುವುದು ಕೊಳ್ಳೆ ಹೊಡೆಯುವುದಕ್ಕಾ, ಜನಪ್ರತಿನಿಧಿಗಳು ಅಂದರೆ ಸೋಗಲಾಡಿ ಸಿದ್ದಣ್ಣರೇ ಎಂದು ಶಾಪ ಹಾಕುವಂತಿದೆ ರಸ್ತೆಯ ರೋದನ.
ಯಲ್ಲಾಪುರದ ಹೃದಯ ಭಾಗದಲ್ಲಿ ಬಹಳಷ್ಟು ಖರ್ಚು ಮಾಡಿ, ಮೂತ್ರ ವಿಸರ್ಜನೆಗೆಂದು ಕಟ್ಟಡ ನಿರ್ಮಾಣ ಮಾಡಲಾಗಿದೆ, ಓಪ್ನಿಂಗ್ ಆಗಿ ಬಳಕೆಯಾಗುತ್ತಿರುವ ಸಂದರ್ಭದಲ್ಲಿ ಏಕಾಏಕಿ ಬೀಗವನ್ನು ಝಡಿಯಲಾಗಿದೆ. ಕೆಲವು ದಿನಗಳ ನಂತರ ಮತ್ತೆ ಓಪ್ನಿಂಗ್ ಸೆರೆಮನಿ ಮಾಡುವವರಿದ್ದಾರೆಯೇ , ಹೀಗಂತೆ ,ಹಾಗಂತೆ, ಸಾರ್ವಜನಿಕರ ಪಿಸು ಪಿಸು ಮಾತುಗಳ ಮಧ್ಯೆ, ರಸ್ತೆ ಬದಿಯಲ್ಲಿ ಉಚ್ಚಿ ಬಿಡುವವರ ಸಂತೆ.
ಇವೆಲ್ಲಕ್ಕೂ ಕಡಿವಾಣ ಹಾಕ್ತಿರಾ ? ಉಚ್ಚೆ ಸಮಸ್ಯೆ ಬಗೆಹರಿಸ್ತಿರಾ,? ಗಂಡಸರು ಏನೋ ತಮ್ಮ ಜಿಪ್ಪಿಗೆ ಕೈ ಹಾಕಿ ರಸ್ತೆಯಂಚಿನಲ್ಲಿ ಕಣ್ಣು ಮುಚ್ಚಿ ಬಿಡಬಹುದು. ಮಹಿಳೆಯರು ಏನು ಮಾಡಬೇಕು? ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಿಲ್ಲದಿದ್ದರೆ ಜನಪ್ರತಿನಿಧಿಗಳಿಂದ ಏನು ಪ್ರಯೋಜನ.? ಜನ ಆಗ್ತೀರೋ ,? ಪ್ರತಿನಿಧಿ ಆಗ್ತೀರೋ,?ನಿಧಿ ಆಗ್ತೀರೋ?
| ನಾಗೇಂದ್ರ ಯಲ್ಲಾಪುರ.✍️