ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.
ಮನೆಯಲ್ಲಿ ತಾಯಿಯಿಂದ ಕೇಳಿ ಕೇಳಿಯೇ ಭಗವದ್ಗೀತೆಯ ಒಂದು ಅಧ್ಯಾಯವನ್ನೇ ಕಂಠಪಾಠ ಮಾಡಿ ಹೇಳುವ ಪುಟಾಣಿ ಪ್ರತಿಭೆ ಇದಕ್ಕೊಂದು ಉತ್ತಮ ನಿದರ್ಶನ. ಅವಳ ಹೆಸರು ಮೇದಿನಿ ಹೆಬ್ಬಾರ್. ವಯಸ್ಸು ಕೇವಲ ನಾಲ್ಕು ವರ್ಷ. ಇನ್ನೂ ಓದಲು, ಬರೆಯಲು ಬಾರದು. ಇದನ್ನೆಲ್ಲ ಬಲ್ಲವರೂ ಮಾಡದ ಸಾಧನೆಯನ್ನು ಈ ವಯಸ್ಸಿನಲ್ಲೇ ಮೇದಿನಿ ಮಾಡಿದ್ದಾಳೆ.
ಹಳವಳ್ಳಿಯ ಕೃಷ್ಣಮೂರ್ತಿ ಹೆಬ್ಬಾರ ಹಾಗೂ ವಿದ್ಯಾ ಹೆಬ್ಬಾರ ದಂಪತಿಯ ಪುತ್ರಿಯಾಗಿರುವ ಮೇದಿನಿ, ಭಗವದ್ಗೀತೆಯ ಮೊದಲ ಅಧ್ಯಾಯವನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿದ್ದಾಳೆ. ತಾಯಿ ವಿದ್ಯಾ ಹೆಬ್ಬಾರ ಅವರು ಹೇಳುವುದನ್ನು ಕೇಳಿ ಕೇಳಿಯೇ ಇಡೀ ಅಧ್ಯಾಯವನ್ನು ಕಂಠಪಾಠ ಮಾಡಿರುವುದು ವಿಶೇಷ.
ಮೇದಿನಿ ಭಗವದ್ಗೀತೆಯ ಶ್ಲೋಕಗಳನ್ನು ಹೇಳುವ ವಿಡಿಯೊ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಾಡಿನಾದ್ಯಂತ ಭಗವದ್ಗೀತಾ ಅಭಿಯಾನದ ಮೂಲಕ ಗೀತೆಯ ಮಹತ್ವ ಸಾರುತ್ತಿರುವ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಸಮ್ಮುಖದಲ್ಲಿಯೂ ಮೇದಿನಿ ಗೀತೆಯ ಶ್ಲೋಕಗಳನ್ನು ಪ್ರಸ್ತುತಪಡಿಸಿದ್ದಾಳೆ. ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ, ಭವಿಷ್ಯ ಉಜ್ವಲವಾಗಲೆಂದು ಆಶೀರ್ವದಿಸಿದ್ದಾರೆ.