ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಎಸ್.ಪಿ. ದರ್ಜೆಯ ಕಮಾಂಡೆಂಟ್ ಆಗಿರುವ ಡಾ.ರಾಮಕೃಷ್ಣ ಮುದ್ದೆಪಾಲ ಅವರು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.
ಯಲ್ಲಾಪುರ ತಾಲೂಕಿನ ದೇಹಳ್ಳಿ ಸಮೀಪದ ಮುದ್ದೆಪಾಲಿನವರಾದ ಡಾ.ರಾಮಕೃಷ್ಣ, ಗ್ರಾಮೀಣ ಮೂಲದವರಾಗಿ, ಉನ್ನತ ಹುದ್ದೆಗೇರಿ, ರಾಷ್ಟ್ರಪತಿಗಳ ಪದಕ ಪಡೆಯುವ ಮಟ್ಟಿಗೆ ಸಾಧಿಸಿರುವುದು ತಾಲೂಕಿಗೆ ಅಭಿಮಾನದ ಸಂಗತಿ.
ದೇಹಳ್ಳಿಯ ಮುದ್ದೆಪಾಲಿನ ವೆಂಕಟ್ರಮಣ ಭಟ್ಟ ಹಾಗೂ ಅನಸೂಯಾ ಭಟ್ಟ ದಂಪತಿಯ ಪುತ್ರರಾದ ರಾಮಕೃಷ್ಣ, ಓದಿದ್ದು ಪಶುವೈದ್ಯಕೀಯ ವಿಜ್ಞಾನದ ಪದವಿ. ಆದರೆ ಕರ್ತವ್ಯಕ್ಕೆ ಸೇರಿದ್ದು ಪೊಲೀಸ್ ಇಲಾಖೆಯನ್ನು.
2006 ರಲ್ಲಿ ಡಿ.ವೈ.ಎಸ್.ಪಿ ಶ್ರೇಣಿಯ ಸಹಾಯಕ ಕಮಾಂಡೆಂಟ್ ಆಗಿ ನೇಮಕಗೊಂಡು ಪೊಲೀಸ್ ಇಲಾಖೆ ಸೇರಿದ ಅವರು, ಬೆಳಗಾವಿ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಮೀಸಲು ಪೊಲೀಸ್ ಪಡೆಯಲ್ಲಿ ಎಸ್.ಪಿ. ದರ್ಜೆಯ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಾಮಾಣಿಕತೆ, ಉತ್ತಮ ನಾಯಕತ್ವ, ಕಾರ್ಯಕ್ಷಮತೆಯಿಂದ ಅನೇಕ ಬಾರಿ ಮೇಲಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. 2012 ರಲ್ಲಿ ಮುಖ್ಯಮಂತ್ರಿ ಪೊಲೀಸ್ ಸುವರ್ಣ ಪದಕಕ್ಕೂ ಭಾಜನರಾಗಿದ್ದಾರೆ. 2017 ರಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ನಿಯೋಗದಲ್ಲಿ ಜರ್ಮನಿಯ ಬವೇರಿಯಾಗೆ ಹೋಗಿ, ಪೊಲೀಸ್ ವ್ಯವಸ್ಥೆಯ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಸದ್ಯದಲ್ಲೇ ಡಿಐಜಿಪಿ ಹುದ್ದೆಗೆ ಪದೋನ್ನತಿ ಹೊಂದಲಿದ್ದಾರೆ.
ಇಲಾಖೆಗೆ ಸೇರುವ ಮುನ್ನ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಮುದ್ದೆಪಾಲ ಅವರಿಗಿದೆ. ಯಕ್ಷಗಾನದ ಭಾಗವತರಾದ ತಂದೆಯವರ ಪ್ರಭಾವದಿಂದಾಗಿ ರಾಮಕೃಷ್ಣ ಅವರಲ್ಲೂ ಯಕ್ಷಗಾನದ ಕುರಿತು ಅಪಾರ ಆಸಕ್ತಿಯಿದೆ. ಹವ್ಯಾಸಿಯಾಗಿ ಭಾಗವತಿಕೆಯನ್ನೂ ಮಾಡುವ ಅವರು, ಊರಿಗೆ ಬಂದಾಗ ಯಕ್ಷಗಾನ, ತಾಳಮದ್ದಲೆಗಳಲ್ಲಿ ಭಾಗವತಿಕೆ ಮಾಡುತ್ತಾರೆ. ವೃತ್ತಿ ಜೀವನದ ಒತ್ತಡಗಳ ನಡುವೆಯೂ ಕಲೆಯ ಕುರಿತಾದ ಆಸಕ್ತಿಯನ್ನು ಉಳಿಸಿಕೊಂಡು ಬಂದಿರುವುದು ವಿಶೇಷ.
ಪದಕದ ಬಗ್ಗೆ ಸಂತಸ ಹಂಚಿಕೊಂಡ ಮುದ್ದೆಪಾಲ ಅವರು, ರಾಷ್ಟ್ರಪತಿಗಳ ಪದಕ ದೊರೆತಿರುವುದು ವೃತ್ತಿ ಜೀವನದ ಸಾರ್ಥಕತೆಯ ಕ್ಷಣ. ಎಲೆಮರೆಯ ಕಾಯಿಯಂತೆ ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು. ಹಾಗೆ ಕರ್ತವ್ಯದಲ್ಲಿ ತೊಡಗಿಕೊಂಡ ನಮ್ಮನ್ನು ಈ ರೀತಿ ಗುರುತಿಸಿದಾಗ ಸಂತಸವಾಗುತ್ತದೆ. ಇನ್ನಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸಲು ಪ್ರೇರಣೆಯೂ ಆಗುತ್ತದೆ. ಈ ಮಟ್ಟಕ್ಕೆ ತಲುಪಲು ತಂದೆ-ತಾಯಿಯರ ಪ್ರೋತ್ಸಾಹ, ಕುಟುಂಬದವರ ಸಹಕಾರ, ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಕಾರಣ ಎಂದರು.