ಜಾನಕಿ ಹಾಗೂ ರಾಜೇಶ್ವರಿ ಎಂಬಾತರಿಗೆ ಹುಟ್ಟಿನಿಂದಲೂ ಕೈ-ಕಾಲು ಸರಿಯಿಲ್ಲ. ಯಾರೂ ಅವರನ್ನು ಮಾತನಾಡಿಸುವವರು ಇರಲಿಲ್ಲ. ಹೀಗಾಗಿ ದಶಕದ ಹಿಂದೆ ಅವರ ಮನೆಯಲ್ಲಿ ಊಟಕ್ಕೂ ಗತಿ ಇರಲಿಲ್ಲ. ಆದರೆ, ಇದೀಗ ಅವರು ಹತ್ತಾರು ಜನರಿಗೆ ಉದ್ಯೋಗ ನೀಡಿ ಅವರ ಬದುಕಿಗೂ ದಾರಿದೀಪವಾಗಿದ್ದಾರೆ.
ಕಾರವಾರದಲ್ಲಿನ ಸರ್ವೋದಯ ನಗರದಲ್ಲಿ ವಾಸವಿರುವ ಜಾನಕಿ ಹಾಗೂ ರಾಜೇಶ್ವರಿ ಹತ್ತಾರು ನೋವು, ನೂರಾರು ಅವಹೇಳನ, ಸಾವಿರಾರು ಜನರ ವಕ್ರದೃಷ್ಟಿಯ ನಡುವೆಯೇ ಸಾಹಸ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ತಮ್ಮಲ್ಲಿನ ನ್ಯೂನ್ಯತೆಗಳನ್ನು ಬದಿಗೊತ್ತಿ ಸ್ವಾವಲಂಬಿಗಳಾಗಿದ್ದಾರೆ. ಜೊತೆಗೆ ತಮ್ಮ ಜೊತೆಗಿರುವವರನ್ನು ಸ್ವಾವಲಂಬಿಯನ್ನಾಗಿ ಮಾಡಿದ್ದಾರೆ. ಜಾನಕಿ ಹಾಗೂ ರಾಜೇಶ್ವರಿ ಅವರ ಸಹೋದರ ನಾಗರಾಜ ಸಹ ವಿಕಲಚೇತನರಾಗಿದ್ದರು. ಈ ಸಹೋದರಿಯರು ತಮ್ಮ ನಾಗರಾಜನ ಬದುಕಿಗೂ ದಾರಿ ತೊರಿದ್ದರು. ಆದರೆ, ನಾಗರಾಜ್ ಈಗಿಲ್ಲ. ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಿದ್ದ ಅವರು ನಾಲ್ಕು ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದಾರೆ.
ಈ ಕುಟುಂಬದವರು ಮೊದಲು ಲಾಟರಿ ಮಾರಿ ಇವರು ಜೀವನ ನಡೆಸುತ್ತಿದ್ದರು. ನಾಗರಾಜ್ ನಡೆಸುವ ಲಾಟರಿ ಮಾರಾಟ ಉದ್ಯೋಗದ ಎಲ್ಲರೂ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ, ಲಾಟರಿ ನಿಷೇಧ ಕಾಯ್ದೆ ಬಂದಾಗ ಅವರ ಕುಟುಂಬ ಬೀದಿಗೆ ಬಿದ್ದಿತು. ಸಾಲದ ಶೂಲ ಬೆಳೆಯುತ್ತಲೇ ಹೊಯಿತು. ಕೊನೆಗೆ ಸಾಲ ಕೊಡುವವರು ಕೂಡ ಸಿಗಲ್ಲಿಲ್ಲ. ಇವರಿಗೆ ಬೇರೆ ಉದ್ಯೋಗದ ಬಗ್ಗೆ ಅರಿವು ಇರಲಿಲ್ಲ.
ಹೀಗಿರುವಾಗ ಸಹೋದರ ನಾಗರಾಜ್‌ಗೆ ನೈತಿಕ ಬೆಂಬಲ ನೀಡಿದ ಇಬ್ಬರು ಸಹೋದರಿಯರು ಸ್ವ ಸಹಾಯ ಸಂಘವೊoದನ್ನು ರಚಿಸಿದರು. ಅದಕ್ಕೆ ಸ್ಪೂರ್ತಿ ಎಂದು ಹೆಸರಿಟ್ಟರು. ಆ ಸ್ಪೂರ್ತಿಯೇ ಇವರ ಜೀವನದ ದಿಕ್ಕು ಬದಲಿಸಿತು. ಸ್ವ ಸಹಾಯ ಸಂಘದ ಮೂಲಕ ಇನ್ನಿತರರಿಗೂ ಉದ್ಯೋಗ ನೀಡಿದರು. ಮನೆಯಲ್ಲಿಯೇ ಫಿನೈಲ್ ತಯಾರಿಸಿ, ಅದನ್ನು ಮಾರುಕಟ್ಟೆಗೆ ಬಿಟ್ಟರು. ಕ್ರಮೇಣವಾಗಿ ಸೋಪು, ಎಣ್ಣೆ ತಯಾರಿಕೆಗೂ ಮುಂದಾದರು. ಸ್ವ ಸಹಾಯ ಸಂಘದ ಮೂಲಕ ಊರಿನ 14ಮಂದಿಗೆ ಪೇಂಟಿoಗ್ ಹಾಗೂ ಮರಗೆಲಸ ಮಾಡುವುದನ್ನು ಕಲಿಸಿದರು. ತಾವು ಸ್ವಾವಲಂಬಿಗಳಾಗಿ, ಸಂಘದವರ ಅಭಿವೃದ್ಧಿಗೂ ಶ್ರಮಿಸಿದರು.
ತಂದೆ ಸಾವಿನ ನಂತರ ಬದುಕಿನ ಮೊದಲ ಆಘಾತ ಎದುರಿಸಿದ್ದ ಈ ಕುಟುಂಬ, ಉದ್ಯೋಗ ಕೈ ತಪ್ಪಿದಾಗ ದಿಕ್ಕೇ ತೋಚದಂತಾಗಿತ್ತು. ವಿಕಲ ಚೇತನ ಮಕ್ಕಳನ್ನು ಹೊತ್ತ ತಾಯಿ ಸಾವಿತ್ರಿಯ ಕರುಳು ನಿತ್ಯವೂ ಸುಡುತ್ತಲಿತ್ತು. ಸದ್ಯ ಪುಟ್ಟದೊಂದು ಗೂಡಂಗಡಿ ಇವರ ಬದುಕಿಗೆ ಬದುಕಾಗಿದೆ. ಅದೇ ಗೂಡಿನಲ್ಲಿ ಕುಳಿತು ಕುಟುಂಬದವರು ಫಿನೈಲ್ ಮಾರುತ್ತಾರೆ. ಜಾನಕಿ ಹಾಗೂ ರಾಜೇಶ್ವರಿ ಫಿನೈಲ್ ತಯಾರಿಸುವುದರ ಜೊತೆ ಹೊಲಿಗೆ ಕೆಲಸವನ್ನು ಮಾಡುತ್ತಾರೆ.
Discussion about this post